ಪತ್ನಿಯೆದುರೇ ಉಗ್ರರ ಗುಂಡಿಗೆ ಶುಭಂ ಬಲಿ: ಮುಗಿಲು ಮುಟ್ಟಿದ ಕುಟುಂಬಿಕರ ರೋದನ

ಶುಭಂ ದ್ವಿವೇದಿ | PC : NDTV
ಕಾನ್ಪುರ: ಕಾನ್ಪುರದ 31 ವರ್ಷದ ಉದ್ಯಮಿ ಶುಭಂ ದ್ವಿವೇದಿ ಅವರು ಮದುವೆಯಾಗಿ ಕೇವಲ ಎರಡು ತಿಂಗಳುಗಳಷ್ಟೇ ಕಳೆದಿದ್ದವು. ಆದರೆ ಮಂಗಳವಾರದ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ಲ್ಲಿ ಅವರು ತನ್ನ ಪತ್ನಿಯ ಎದುರಿನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ಕಾನ್ಪುರದಲ್ಲಿರುವ ಅವರು ಕುಟುಂಬಿಕರ ರೋದನ ಮುಗಿಲುಮುಟ್ಟಿತ್ತು.
ಸಿಮೆಂಟ್ ವ್ಯವಹಾರದ ಕಂಪೆನಿಯನ್ನು ನಡೆಸುತ್ತಿದ್ದ ಶುಭಂ ಅವರು ಎಪ್ರಿಲ್ 16ರಿಂದ ಕಾಶ್ಮೀರಕ್ಕೆ ಪತ್ನಿ ಹಾಗೂ ಇತರ 9 ಮಂದಿ ಇತರ ಕುಟುಂಬಗಳ ಸದಸ್ಯರೊಂದಿಗೆ ಒಂದು ವಾರದ ಪ್ರವಾಸ ಕೈಗೊಂಡಿದ್ದರು. ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ 26 ಮಂದಿಯಲ್ಲಿ ಶುಭಂ ಕೂಡಾ ಒಬ್ಬರು.
ಶುಭಂನ ಹೆತ್ತವರು,ಸಹೋದರಿ, ಸೋದರಿ, ಭಾವ ಹಾಗೂ ಅತ್ತೆಯಂದಿರು ಪಹಲ್ಗಾಮ್ ತಲುಪುವ ಮುನ್ನ ಸೋನಾಮಾರ್ಗ್ ಹಾಗೂ ಗುಲ್ಮಾರ್ಗ್ಗೆ ಭೇಟಿ ನೀಡಿದ್ದರು.
ಶುಭಂ ದಂಪತಿ ಮಂಗಳವಾರ ಮಧ್ಯಾಹ್ನ ಕುದುರೆ ಸವಾರಿಗೆ ನಿರ್ಧರಿಸಿದರೆ, ಕುಟುಂಬದ ಇತರ ಸದಸ್ಯರ ಸಮೀಪದ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು.
ಆದರೆ ಈ ನವದಂಪತಿಯ ವಿಹಾರ ಕೆಲವೇ ಕ್ಷಣಗಳಲ್ಲಿ ಆಕ್ರಂದನವಾಗಿ ಪರಿಣಮಿಸಿತು. 2-3 ಭಯೋತ್ಪಾದಕರು ಅವರಿಗೆ ಎದುರಾಗಿ ಬಂದು ಅವರ ಗುರುತನ್ನು ಕೇಳಿದರು. ಆನಂತರ ಪತ್ನಿಯ ಎದುರಲ್ಲೇ ಅವರ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಶುಭಂ ಅವರನ್ನು ಹತ್ಯೆಗೈದ ಬಳಿಕ ಭಯೋತ್ಪಾದಕರಲ್ಲೊಬ್ಬಾತ ಅವರ ಪತ್ನಿಯೆಡೆಗೆ ತಿರುಗಿ, ನಾವು ನಿನ್ನ ಪತಿಗೆ ಏನು ಮಾಡಿದ್ದೇವೆಂಬುದನ್ನು ನಿನ್ನ ಸರಕಾರಕ್ಕೆ ಹೋಗಿ ಹೇಳು’’ ಎಂದು ಹೇಳಿದ್ದಾಗಿ ಸೌರಭ್ ತಿಳಿಸಿದ್ದಾರೆ.