ಸ್ಮಾರ್ಟ್ ಸಿಟಿ ಅವಾರ್ಡ್: ಅತ್ಯುತ್ತಮ ಸ್ಮಾರ್ಟ್ ಸಿಟಿ ಯಾವುದು? ಯಾವ ರಾಜ್ಯಕ್ಕೆ ಅಗ್ರಸ್ಥಾನ ಗೊತ್ತೇ?

Update: 2023-08-26 05:39 GMT

Photo: twitter.com/HardeepSPuri

ಹೊಸದಿಲ್ಲಿ: ದೇಶದ ಅತ್ಯಂತ ಸ್ವಚ್ಛನಗರ ಎಂಬ ಹೆಗ್ಗಳಿಕೆಯನ್ನು ಆರು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಇಂಧೋರ್ ತನ್ನ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ. 2022ನೇ ವರ್ಷದ ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿಯಲ್ಲಿ 100 ಸ್ಮಾರ್ಟ್‍ಸಿಟಿಗಳ ಪೈಕಿ ಅತ್ಯುತ್ತಮ ನಗರ ಎನಿಸಿಕೊಂಡಿದೆ. ನಾಲ್ಕನೇ ಆವೃತ್ತಿಯ ಸ್ಮಾರ್ಟ್ ಸಿಟಿ ಅವಾಡ್ರ್ಸ್ ಸ್ಪರ್ಧೆಯಲ್ಲಿ ಸೂರತ್ ಹಾಗೂ ಆಗ್ರಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ನ್ಯೂಟೌನ್ (ಕೊಲ್ಕತ್ತಾ) ಸಂಚಾರದಲ್ಲಿ ದ್ವಿತೀಯ ಹಾಗೂ ಪರಿಸರ ನಿರ್ಮಾಣದಲ್ಲಿ ತೃತೀಯ ಹೀಗೆ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಕಳೆದ ವರ್ಷದ ಸಾಧನೆಗಾಗಿ ಶುಕ್ರವಾರ ಪ್ರಕಟಿಸಲಾದ ಫಲಿತಾಂಶದಲ್ಲಿ ಮಧ್ಯಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಪೈಕಿ ಅತ್ಯುತ್ತಮ ಸಾಧನೆ ಮಾಡಿದ ಎರಡು ಅಗ್ರ ರಾಜ್ಯಗಳಾಗಿ ಹೊರಹೊಮ್ಮಿವೆ.

ರಾಜಸ್ಥಾನ ಮತ್ತು ಉತ್ತರ ಪ್ರದೇಶ ಜಂಟಿ ಮೂರನೇ ಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಅತ್ಯಧಿಕ ಅಂಕ ಪಡೆದಿದೆ. ಇಂಧೋರ್ ನಲ್ಲಿ ಸೆಪ್ಟೆಂಬರ್ 27ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡುವರು ಎಂದು ಗೃಹನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ನಗರ ವ್ಯವಹಾರಗಳ ಸಚಿವಾಲಯದ ಎಲ್ಲ ಮಿಷನ್‍ಗಳಲ್ಲಿ ಇಂಧೋರ್ ಅಗ್ರ ಸಾಧನೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದರೂ, ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯದಲ್ಲಿ ಅಧಿಕಾರ ವಿರೋಧಿ ಅಲೆಯನ್ನು ತಡೆಯಲು ಮುಖ್ಯಮಂತ್ರಿ ಈ ಸಾಧನೆಯನ್ನು ಪ್ರಮುಖ ವಿಷಯವಾಗಿ ಬಿಂಬಿಸುವ ಸಾಧ್ಯತೆ ಇದೆ.

ಕುತೂಹಲಕರ ವಿಚಾರವೆಂದರೆ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಿರುವ ಕೇಂದ್ರ ಸರ್ಕಾರದ ಅಧೀನದ ಎನ್‍ಡಿಎಂಸಿ ಪ್ರದೇಶ ಯಾವುದೇ 12 ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿಲ್ಲ. ಆದರೆ ಎನ್‍ಡಿಎಂಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಗರಗಳ ಪೈಕಿ ಇಂಧೋರ್ ಆರು ಪ್ರಶಸ್ತಿ ಗೆದ್ದಿದ್ದರೆ, ಆಗ್ರಾ ನಾಲ್ಕು, ಸೂರತ್ ಅಹ್ಮದಾಬಾದ್ ಹಾಗೂ ಚಂಡೀಗಢ ತಲಾ ಮೂರು, ಜಬಲ್ಪುರ, ನ್ಯೂಟೌನ್ ಕೊಲ್ಕತ್ತಾ ಹಾಗೂ ರಾಯ್ಪುರ ತಲಾ ಎರಡು ಪ್ರಶಸ್ತಿಗಳನ್ನು ಪಡೆದಿವೆ. 1.11 ಲಕ್ಷ ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆಗಳ ಪೈಕಿ ಶೇಕಡ 76ರಷ್ಟು ಯೋಜನೆಗಳು ಪೂರ್ಣಗೊಂಡಿವೆ. 7938 ಯೋಜನೆಗಳ ಪೈಕಿ 1894 ಯೋಜನೆಗಳು ಮುಂದಿನ ಜೂನ್ ಒಳಗಾಗಿ ಮುಗಿಯುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News