ಮಾಜಿ ನ್ಯಾಯಾಧೀಶರಿಂದಲೂ ಉನ್ನತ ಮಟ್ಟದ ನಡವಳಿಕೆಯನ್ನು ಸಮಾಜ ಬಯಸುತ್ತದೆ : ಡಿ.ವೈ.ಚಂದ್ರಚೂಡ್
ಹೊಸದಿಲ್ಲಿ : ಮಾಜಿ ನ್ಯಾಯಾಧೀಶರುಗಳನ್ನು ಕಾನೂನಿನ ಪರಿಪಾಲಕರೆಂದು ಸಮಾಜವು ಭಾವಿಸುತ್ತಾ ಬಂದಿದೆ. ಹೀಗಾಗಿ ಅವರ ಜೀವನಶೈಲಿಯು , ಕಾನೂನಿನ ವ್ಯವಸ್ಥೆಯ ಮೇಲೆ ಸಮಾಜ ಇರಿಸಿರುವಂತಹ ವಿಶ್ವಾಸಕ್ಕೆ ಅನುಗುಣವಾಗಿರಬೇಕು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದಚೂಡ್ ಅವರು ಅಭಿಪ್ರಾಯಿಸಿದ್ದಾರೆ.
ಎನ್‌ಡಿಟಿವಿ ಸುದ್ದಿವಾಹಿನಿಯು ರವಿವಾರ ಆಯೋಜಿಸಿದ್ದ ಸಂವಿಧಾನ @ 75 ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ‘‘ನ್ಯಾಯಾಧೀಶರುಗಳು ಹುದ್ದೆಯಿಂದ ನಿರ್ಗಮಿಸಿದ ಬಳಿಕವೂ ಸಮಾಜವು ಅವರನ್ನು ನ್ಯಾಯಾಧೀಶರೆಂಬಂತೆಯೇ ಕಾಣುತ್ತದೆ. ಹೀಗಾಗಿ ಇತರ ನಾಗರಿಕರ ಮಟ್ಟಿಗೆ ಸರಿಯೆಂದು ಅನಿಸುವ ಕೆಲವು ವಿಷಯಗಳನ್ನೂ ಹುದ್ದೆಯಿಂದ ನಿರ್ಗಮಿಸಿದ ನ್ಯಾಯಾಧೀಶರು ಮಾಡುವುದು ಸರಿಯಲ್ಲವೆಂದು ಸಮಾಜವು ಭಾವಿಸುತ್ತದೆ’’ ಎಂದವರು ಹೇಳಿದರು. ಆದರೆ ತಾನು ಈ ಹಿಂದೆ ರಾಜಕೀಯಕ್ಕೆ ಸೇರ್ಪಡೆಗೊಂಡಿರುವ ಕೆಲವು ನ್ಯಾಯಾಧೀಶರ ಕುರಿತಾಗಿ ಈ ಮಾತನ್ನು ಹೇಳುತ್ತಿಲ್ಲವೆಂದು ಚಂದ್ರಚೂಡ್ ಸ್ಪಷ್ಟಪಡಿಸಿದರು.
ನಿವೃತ್ತಿಯ ಬಳಿಕ ನ್ಯಾಯಾಧೀಶರು ಕೈಗೊಳ್ಳುವ ನಿರ್ಧಾರವನ್ನು ಆಧರಿಸಿ, ಅವರು ಕರ್ತವ್ಯದಲ್ಲಿದ್ದಾಗ ಮಾಡಿ ಕೆಲಸವನ್ನು ಜನರು ಅಳೆಯುತ್ತಾರೆ. ಇದನ್ನು ಪ್ರತಿಯೊಬ್ಬ ನ್ಯಾಯಾಧೀಶನೂ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ. ಒಂದು ವೇಳೆ ನಿವೃತ್ತಿಯ ಬಳಿಕ ನ್ಯಾಯಾಧೀಶರು ರಾಜಕೀಯಕ್ಕೆ ಸೇರ್ಪಡೆಗೊಂಡಲ್ಲಿ, ಅವರು ಅಂಗೀಕರಿಸಿರುವ ರಾಜಕಾರಣವು ಅವರ ನ್ಯಾಯಾಂಗದಲ್ಲಿದ್ದಾಗ ಕೆಲಸದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆಯೆಂಬ ಬಗ್ಗೆ ಸಮಾಜದ ಜನರಿಗೆ ಕೆಲವು ನಿರ್ದಿಷ್ಟ ಗ್ರಹಿಕೆಗಳನ್ನು ಮೂಡಿಸುವ ಸಾಧ್ಯತೆಯಿದೆಯೆಂದು ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಾಧೀಶರಿಗೂ ಖಾಸಗಿ ಜೀವನವಿದ್ದು, ಇತರ ಪೌರರಿಗೆ ಸಮಾನವಾದ ಹಕ್ಕುಗಳನ್ನು ಅವರು ಹೊಂದಿದ್ದಾರೆ. ಆದರೆ ಸಮಾಜವು ಅವರಿಂದ ಉನ್ನತ ಮಟ್ಟದ ನಡವಳಿಕೆಯನ್ನು ಬಯಸುತ್ತದೆ ಎಂವರು ಅಭಿಪ್ರಾಯಿಸಿದರು.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದ ಡಿ.ವೈ.ಚಂದ್ರಚೂಡ್ ಅವರು ನವೆಂಬರ್ ತಿಂಗಳ ಆರಂಭದಲ್ಲಿ ನಿವೃತ್ತರಾಗಿದ್ದರು.