ರಾಷ್ಟ್ರಪತಿ ಬಗ್ಗೆ ಸೋನಿಯಾ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

ದ್ರೌಪದಿ ಮುರ್ಮು, ಸೋನಿಯಾಗಾಂಧಿ | PTI
ಹೊಸದಿಲ್ಲಿ: ಸಂಸತ್‌ನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಗ್ಗೆ ಕಾಂಗ್ರೆಸ್ ಸಂಸದೆ ಸೋನಿಯಾಗಾಂಧಿ ಅವರ ಪ್ರತಿಕ್ರಿಯೆಯು ವಿವಾದದ ಕಿಡಿಯನ್ನು ಸೃಷ್ಟಿಸಿದೆ.
‘‘ಬಡಪಾಯಿ ಮಹಿಳೆ.. ರಾಷ್ಟ್ರಪತಿಯವರು ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿದ್ದರು. ಅವರಿಗೆ ಮಾತನಾಡುವುದೇ ಕಷ್ಟವಾಗಿತ್ತು. ಕಳಪೆ ವಿಷಯ’’ ಎಂದು ಸೋನಿಯಾ ಅವರು ಪ್ರತಿಕ್ರಿಯಿಸಿದ್ದರು.
ರಾಷ್ಟ್ರಪತಿ ಭಾಷಣದ ಬಗ್ಗೆ ಸೋನಿಯಾ ಅವರು ನೀಡಿದ ಪ್ರತಿಕ್ರಿಯೆಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ನಾನು ಹಾಗೂ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆೆ ಸೋನಿಯಾಗಾಂಧಿ ಬಳಸಿದ ‘ಕಳಪೆ ವಿಷಯ’ ಎಂಬ ಪದವನ್ನು ಬಳಸಿದ್ದನ್ನು ತೀವ್ರವಾಗಿ ಖಂಡಿಸುತ್ತಾನೆ. ಉದ್ದೇಶಪೂರ್ವಕವಾಗಿ ಇಂತಹ ಪದಗಳ ಬಳಕೆಯು ಕಾಂಗ್ರೆಸ್ ಪಕ್ಷದ ಮೇಲಂತಸ್ತಿನ, ಬಡಜನ ವಿರೋಧಿ ಹಾಗೂ ಬುಡಕಟ್ಟು ವಿರೋಧಿ ಪ್ರವೃತ್ತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷವು ನಿಶರ್ತವಾಗಿ ಮಾನ್ಯ ರಾಷ್ಟ್ರಪತಿಯವರಲ್ಲಿ ಹಾಗೂ ಭಾರತದ ಬುಡಕಟ್ಟು ಜನರ ಬಳಿ ಕ್ಷಮೆಯಾಚಿಸಬೇಕು ಎಂದವರು ಆಗ್ರಹಿಸಿದ್ದಾರೆ.
*ಸೋನಿಯಾ ಹೇಳಿಕೆ ಬುಡಕಟ್ಟು ಜನರಿಗೆ ಮಾಡಿದ ಅವಮಾನ: ಮೋದಿ
ದ್ರೌಪದಿ ಮುರ್ಮು ಅವರನ್ನು ಬಡಪಾಯಿ ಎಂದು ಬಣ್ಣಿಸಿದ ಸೋನಿಯಾ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು,ದಲಿತರನ್ನು,ಬುಡಕಟ್ಟು ಜನರನ್ನು ಮತ್ತು ಓಬಿಸಿಗಳನ್ನು ಅವಮಾನಿಸುವುದು ಕಾಂಗ್ರೆಸ್‌ನ ಚಾಳಿಯಾಗಿದೆ. ಸೋನಿಯಾ ಅವರ ಹೇಳಿಕೆ ಶಾಹಿ ಪರಿವಾರ್ (ವಂಶರಾಜಕಾರಣ)ನ ಉದ್ದಟತನವನ್ನು ತೋರಿಸುತ್ತದೆ ಹಾಗೂ ಭಾರತದ ಕೋಟ್ಯಂತರ ಬುಡಕಟ್ಟು ಜನರಿಗೆ ಮಾಡಿದ ಅವಮಾನವಾಗಿದೆ ಎಂದು ಪ್ರಧಾನಿ ಹೇಳಿದರು.
ಮುರ್ಮು ಅವರ ಮಾತೃಭಾಷೆ ಒಡಿಯಾ ಆಗಿರುವ ಹೊರತಾಗಿಯೂ ಅವರು ಸಂಸತ್‌ನಲ್ಲಿ ಹಿಂದಿಯಲ್ಲಿ ಮಾಡಿದ ಭಾಷಣವು ಸ್ಪೂರ್ತಿದಾಯಕವಾಗಿತ್ತು ಎಂದು ಮೋದಿ ಹೇಳಿದರು.