3ನೇ ಏಕದಿನ | ದಕ್ಷಿಣ ಆಫ್ರಿಕಾಕ್ಕೆ ಜಯ, ಸರಣಿ ಸ್ವೀಪ್‌ನಿಂದ ಪಾರು ; ಐತಿಹಾಸಿಕ ಸರಣಿ ಗೆದ್ದ ಅಫ್ಘಾನಿಸ್ತಾನ

Update: 2024-09-23 15:47 GMT

PC: PTI

ಶಾರ್ಜಾ: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಸರಣಿ ಸ್ವೀಪ್ ಮುಖಭಂಗದಿಂದ ಪಾರಾಯಿತು.

ರವಿವಾರ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ಸರಣಿಯಲ್ಲಿ ಮೊದಲ ಬಾರಿ 34 ಓವರ್‌ಗಳಲ್ಲಿ ಕೇವಲ 169 ರನ್‌ಗೆ ಸರ್ವಪತನಗೊಂಡಿತು. ಗೆಲ್ಲಲು ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕಾ ತಂಡ ಮಾರ್ಕ್ರಮ್ ಅರ್ಧಶತಕದ(ಔಟಾಗದೆ 69)ನೆರವಿನಿಂದ 17 ಓವರ್‌ಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿತು.

ಅನನುಭವಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ 106 ಹಾಗೂ 134 ರನ್ ಗಳಿಸಿ ಆಲೌಟಾಗಿತ್ತು. ಆದರೆ, ಶಾರ್ಜಾದ ನಿಧಾನಗತಿಯ ಪಿಚ್‌ನಲ್ಲಿ ಅನುಭವಿ ಆಟಗಾರ ಮಾರ್ಕ್ರಮ್ ಎಚ್ಚರಿಕೆಯಿಂದ ಆಡಿ 67 ಎಸೆತಗಳಲ್ಲಿ ಔಟಾಗದೆ 69 ರನ್ ಗಳಿಸಿದರು. 10 ಇನಿಂಗ್ಸ್‌ಗಳಲ್ಲಿ ಮೊದಲ ಅರ್ಧಶತಕ ಗಳಿಸಿದ ಮಾರ್ಕ್ರಮ್ ಅವರು ಸ್ಟಬ್ಸ್‌ರೊಂದಿಗೆ 4ನೇ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿದರು.

2ನೇ ಪಂದ್ಯದ ವೇಳೆ ಗಾಯಗೊಂಡಿದ್ದ ರಶೀದ್ ಖಾನ್ ಹಾಗೂ ವಿಶ್ರಾಂತಿ ಪಡೆದಿರುವ ಫಝಲ್ ಹಕ್ ಫಾರೂಕಿಯ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಬೌಲಿಂಗ್ ದಾಳಿ ದುರ್ಬಲವಾಗಿತ್ತು.

ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸಿರುವ ಅಫ್ಘಾನಿಸ್ತಾನ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಇದಕ್ಕೂ ಮೊದಲು ಟಾಸ್ ಜಯಿಸಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. 2ನೇ ಪಂದ್ಯದಲ್ಲಿ ಶತಕ ಗಳಿಸಿದ್ದ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ 94 ಎಸೆತಗಳಲ್ಲಿ 89 ರನ್ ಕೊಡುಗೆ ನೀಡಿ ಇನಿಂಗ್ಸ್ ಆಧರಿಸಿದರು. ಆದರೆ ಗುರ್ಬಾಝ್ ಹೊರತುಪಡಿಸಿ ಉಳಿದ 8 ಅಫ್ಘಾನ್ ಬ್ಯಾಟರ್‌ಗಳು 10ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇದರಲ್ಲಿ ಮೂವರು ರನೌಟಾದರು.

9ನೇ ಕ್ರಮಾಂಕದ ಬ್ಯಾಟರ್ ಮುಹಮ್ಮದ್ ಘಝನ್‌ಫರ್ 15 ಎಸೆತಗಳಲ್ಲಿ 31 ರನ್ ಗಳಿಸಿದರು. ಲುಂಗಿ ಗಿಡಿ, ಪೀಟರ್ ಹಾಗೂ ಫೆಹ್ಲುಕ್ವಾಯೊ ತಲಾ 2 ವಿಕೆಟ್‌ಗಳನ್ನು ಪಡೆದು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು.

►ಸಂಕ್ಷಿಪ್ತ ಸ್ಕೋರ್

ಅಫ್ಘಾನಿಸ್ತಾನ: 34 ಓವರ್‌ಗಳಲ್ಲಿ 169/10

(ರಹಮಾನುಲ್ಲಾ ಗುರ್ಬಾಝ್ 89, ಘಝನ್‌ಫರ್ 31, ಫೆಹ್ಲುಕ್ವಾಯೊ 2-17, ಲುಂಗಿ ಗಿಡಿ 2-22, ಪೀಟರ್ 2-22)

ದಕ್ಷಿಣ ಆಫ್ರಿಕಾ: 33 ಓವರ್‌ಗಳಲ್ಲಿ 170/3

(ಮರ್ಕ್ರಮ್ ಔಟಾಗದೆ 69, ಸ್ಟರ್ಬ್ಸ್ ಔಟಾಗದೆ 26, ಅಹ್ಮದ್ 1-17)

ಪಂದ್ಯಶ್ರೇಷ್ಠ: ರಹಮಾನುಲ್ಲಾ ಗುರ್ಬಾಝ್

ಸರಣಿಶ್ರೇಷ್ಠ: ರಹಮಾನುಲ್ಲಾ ಗುರ್ಬಾಝ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News