ಸಂಸತ್ತಿನ ವಿಶೇಷ ಅಧಿವೇಶನ: ಒಂದು ರಾಷ್ಟ್ರ-ಒಂದು ಚುನಾವಣೆ,ಮಹಿಳಾ ಮೀಸಲಾತಿ ಯುಸಿಸಿ ಮಸೂದೆಗಳು ಮಂಡನೆಯಾಗುವ ಸಾಧ್ಯತೆ

Update: 2023-09-11 16:06 GMT

Photo: PTI 

ಹೊಸದಿಲ್ಲಿ: ಇದೇ ತಿಂಗಳ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಿಶೇಷ ಅಧಿವೇಶನವನ್ನು ಕರೆಯುವ ತನ್ನ ಉದ್ದೇಶದ ಕುರಿತು ಯಾವುದೇ ಮಾಹಿತಿಯನ್ನು ಕೇಂದ್ರವು ಈವರೆಗೆ ಬಹಿರಂಗಗೊಳಿಸಿಲ್ಲ. ಆದರೆ ಇದು ಅಧಿವೇಶನ ಯಾವುದರ ಕುರಿತಾಗಿರಬಹುದು ಎಂಬ ಕುರಿತು ವದಂತಿಗಳಿಗೆ ತಡೆಯನ್ನುಂಟು ಮಾಡಿಲ್ಲ.

ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎಂಬ ಊಹಾಪೋಹಕ್ಕೊಳಗಾಗಿರುವ ವಿವಿಧ ಮಸೂದೆಗಳಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ,ಏಕರೂಪ ನಾಗರಿಕ ಸಂಹಿತೆ (UCC) ಯನ್ನು ಪರಿಚಯಿಸುವ ಮತ್ತು ಮಹಿಳಾ ಮೀಸಲಾತಿ ಮಸೂದೆಗಳು ಸೇರಿವೆ.

ಯುಸಿಸಿಯು ಬಿಜೆಪಿಯ ಅತ್ಯಂತ ಹಳೆಯ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ ಮತ್ತು ಸುದೀರ್ಘ ಕಾಲದಿಂದ ಬಾಕಿಯುಳಿದಿದೆ. 2024ರ ಚುನಾವಣೆಗಳಿಗೆ ಮುನ್ನ ರಾಜಕೀಯ ಬೆಂಬಲವನ್ನು ಕ್ರೋಡೀಕರಿಸುವ ಪ್ರಯತ್ನವಾಗಿ ಯುಸಿಸಿಯನ್ನು ಜಾರಿಗೆ ತರಲು ಮೋದಿ ಅಂತಿಮವಾಗಿ ನಿರ್ಧರಿಸಿದ್ದಾರೆಯೇ ಎನ್ನುವುದನ್ನು ತಿಳಿಯಲು ಒಂದು ವಾರ ಕಾಯಬೇಕಿದೆ.

ಮಹಿಳಾ ಮೀಸಲಾತಿ ಮಸೂದೆಯೂ ದೀರ್ಘಕಾಲದಿಂದ ಬಾಕಿಯುಳಿದಿದೆ,ಆದರೆ ಯುಸಿಸಿಯಷ್ಟಲ್ಲ. 2008ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರವು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿತ್ತು ಮತ್ತು 2010,ಮೇ 9ರಂದು 186-1 ಮತಗಳೊಂದಿಗೆ ಅದು ಅಂಗೀಕಾರಗೊಂಡಿತ್ತು.

ಆದಾಗ್ಯೂ ಲೋಕಸಭೆಯಲ್ಲಿ ಈ ಮಸೂದೆಯನ್ನೆಂದೂ ಪರಿಗಣನೆಗೆ ಎತ್ತಿಕೊಳ್ಳಲಾಗಿರಲಿಲ್ಲ. 15ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆಯೂ ಅಸ್ತಿತ್ವವನ್ನು ಕಳೆದುಕೊಂಡಿತ್ತು.

ಆ ಸಮಯದಲ್ಲಿ ಆರ್ ಜೆ ಡಿ,ಜೆಡಿಯು ಮತ್ತು ಎಸ್ಪಿ ಮಸೂದೆಯನ್ನು ಬಲವಾಗಿ ವಿರೋಧಿಸಿದ್ದವು. ಮಹಿಳೆಯರಿಗೆ ಶೇ.33 ಕೋಟಾದಲ್ಲಿ ಹಿಂದುಳಿದ ಗುಂಪುಗಳಿಗೆ ಶೇ.33ರಷ್ಟು ಮೀಸಲಾತಿಗೆ ಅವು ಪಟ್ಟು ಹಿಡಿದಿದ್ದವು.

2014ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯ ಭರವಸೆಯನ್ನು ನೀಡಿದ್ದ ಬಿಜೆಪಿ ತನ್ನ 2019ರ ಅಜೆಂಡಾದಲ್ಲಿ ಅದನ್ನು ಪುನರುಚ್ಚರಿಸಿತ್ತು. ಆದರೆ ಈ ನಿಟ್ಟಿನಲ್ಲಿ ಸರಕಾರವು ಯಾವುದೇ ಹೆಜ್ಜೆಯನ್ನಿರಿಸಿಲ್ಲ.

ಈಗ ಈ ಮಸೂದೆಯ ಅಂಗೀಕಾರವು ಮೋದಿಯವರಿಗೆ ಮಹಿಳಾ ಮತದಾರರ ನಿರ್ಣಾಯಕ ಬೆಂಬಲವನ್ನು ಗಳಿಸಿಕೊಡಬಹುದು ಮತ್ತು ಅವರ ಪ್ರತಿಸ್ಪರ್ಧಿಗಳನ್ನು ಅಚ್ಚರಿಯಲ್ಲಿ ಕೆಡವಬಹುದು ಎಂದು ವಿಶ್ಲೇಸಿಸಲಾಗಿದೆ.

ಭಾರತದ ಇತ್ತೀಚಿನ ಚಂದ್ರಯಾನ-3ರ ಚಂದ್ರನ ಮೇಲೆ ಲ್ಯಾಂಡಿಂಗ್ ಮತ್ತು ವಾರಾಂತ್ಯದಲ್ಲಿ ಆಯೋಜಿಸಿದ್ದ ಜಿ20 ಶೃಂಗಸಭೆಯ ಯಶಸ್ಸನ್ನು ಸಂಭ್ರಮಿಸಲು ವಿಶೇಷ ಅಧಿವೇಶನವನ್ನು ಕರೆದಿರಬಹುದು ಎಂಬ ಊಹಾಪೋಹಗಳೂ ಇವೆ.

ಈ ನಡುವೆ ರಾಜಕೀಯವಾಗಿ ಹೇಳುವುದಾದರೆ ‘ಒಂದು ರಾಷ್ಟ್ರ,ಒಂದು ಚುನಾವಣೆ ’ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯು ಈವರೆಗೆ ಒಂದು ಸಲವೂ ಸಭೆ ಸೇರಿಲ್ಲ. ವಿಶೇಷ ಅಧಿವೇಶನವು ಈ ಯೋಜನೆಯನ್ನು ಚರ್ಚಿಸುವ ಸಾಧ್ಯತೆಯು ಕಂಡು ಬರುತ್ತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಸರಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರೆ ಅದು ನೂತನವಾಗಿ ರಚನೆಗೊಂಡಿರುವ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲಿದೆ,ಏಕೆಂದರೆ ಆರ್ ಜೆ ಡಿ ಮತ್ತು ಎಸ್ಪಿಯಂತಹ ಮೈತ್ರಿಕೂಟದಲ್ಲಿಯ ಕೆಲವು ಪಕ್ಷಗಳು ಮಸೂದೆಯ ಪ್ರಸ್ತುತ ರೂಪದಲ್ಲಿ ಅದನ್ನು ಬಹಿರಂಗವಾಗಿ ವಿರೋಧಿಸಿದ್ದರೆ,ಕಾಂಗ್ರೆಸ್ ಮಸೂದೆಯ ಪರವಾಗಿದೆ.

ಇಂತಹ ವಿಶೇಷ ಅಧಿವೇಶನವನ್ನು ಕರೆದಿರುವುದು ಇದು ಕೇವಲ ಏಳನೇ ಸಲವಾಗಿದೆ. ಹಿಂದಿನ ಎಲ್ಲ ವಿಶೇಷ ಅಧಿವೇಶನಗಳನ್ನು ಎರಡು ದಿನಗಳಿಗಿಂತ ಹೆಚ್ಚಿನ ಅವಧಿಗೆ ಕರೆಯಲಾಗಿರಲಿಲ್ಲ ಎನ್ನುವುದು ಗಮನಾರ್ಹ. ಸೆಪ್ಟಂಬರ್ 2023ರ ವಿಶೇಷ ಅಧಿವೇಶನವು ಮೊದಲ ಬಾರಿಗೆ ಐದು ದಿನಗಳ ಕಾಲ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News