ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದಿವ್ಯಾಂಗರ ನಾಮನಿರ್ದೇಶನಕ್ಕಾಗಿ ಮಸೂದೆಗಳನ್ನು ಮಂಡಿಸಿದ ಸ್ಟಾಲಿನ್

ಸ್ಟಾಲಿನ್ | PC : PTI
ಚೆನ್ನೈ: ತಮಿಳುನಾಡು ಸ್ಥಳೀಯಾಡಳಿತ ಸಂಸ್ಥೆಗಳ ಕಾಯ್ದೆ 1998 ಹಾಗೂ ತಮಿಳುನಾಡು ಪಂಚಾಯತ್ ಕಾಯ್ದೆ 1994 ಇವುಗಳನ್ನು ತಿದ್ದುಪಡಿಗೊಳಿಸುವ ಎರಡು ನೂತನ ಕಾಯ್ದೆಗಳನ್ನು ಮುಖ್ಯಮಂತ್ರಿ ಸ್ಟಾಲಿನ್ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಿಕಲಾಂಗರನ್ನು ನಾಮನಿರ್ದೇಶನಗೊಳಿಸುವ ಉದ್ದೇಶದಿಂದ ಈ ಎರಡೂ ಮಸೂದೆಗಳಿಗೆ ತಿದ್ದುಪಡಿ ತರಲಾಗಿದೆ. ಸ್ಥಳೀಯಾಡಳಿತದಲ್ಲಿ ವಿಕಲಾಂಗರ ಧ್ವನಿಗಳು ಕೇಳುವಂತೆ ಮಾಡಲು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಾಯಕತ್ವ ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸುವ ಆಶಯವನ್ನು ಈ ಮಸೂದೆಗಳು ಹೊಂದಿವೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ಅವರು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಮಾತನಾಡುತ್ತಾ, ನಗರಾಡಳಿತ ಸಂಸ್ಥೆಗಳಲ್ಲಿ ಕೇವಲ ಕೇವಲ 35 ದಿವ್ಯಾಂಗರಷ್ಟೇ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ಕಾಯ್ದೆಗಳು ಜಾರಿಯಾದ ಬಳಿಕ 650 ದಿವ್ಯಾಂಗರನ್ನು ನಗರಾಡಳಿತ ಸಂಸ್ಥೆಗಳಲ್ಲಿ ನಾಮನಿರ್ದೇಶನಗೊಳಿಸಲಾಗುವುದು. ಅದೇ ರೀತಿ ಗ್ರಾಮಪಂಚಾಯತ್ ಗಳಲ್ಲಿ 12,913, ಪಂಚಾಯತ್ ಒಕ್ಕೂಟಗಳಲ್ಲಿ 388 ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ 37 ಮಂದಿ ದಿವ್ಯಾಂಗರನ್ನು ನಾಮನಿರ್ದೇಶನಗೊಳಿಸಲಾಗುವುದು ಎಂದು ತಿಳಿಸಿದರು.
ಸ್ಟಾಲಿನ್ ಅವರ ಘೋಷಣೆಯನ್ನು ಎಲ್ಲಾ ಶಾಸಕರು, ಡೆಸ್ಕ್‌ಗಳನ್ನು ಗುದ್ದಿ ಸ್ವಾಗತಿಸಿದರು. ಈ ಸಂದರ್ಭ ವಿವಿಧ ದಿವ್ಯಾಂಗರ ಸಂಘಟನೆಗಳ ಪ್ರತಿನಿಧಿಗಳು ವಿಧಾನಸಭೆಯ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.