ಪ್ರಧಾನಿ ಮೋದಿಯವರ ದ್ವೇಷ ಭಾಷಣಗಳು ಮತ್ತು ಚುನಾವಣಾ ಆಯೋಗದ ಮೌನದ ವಿರುದ್ಧ ಸ್ಟಾಲಿನ್ ವಾಗ್ದಾಳಿ

Update: 2024-05-19 11:50 GMT

ಸ್ಟಾಲಿನ್ Photo:PTI

ಚೆನ್ನೈ: ಲೋಕಸಭಾ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ತನ್ನ ಕೋಮು ದ್ವೇಷದ ಭಾಷಣಗಳು ಬಿಜೆಪಿಗೆ ಯಾವುದೇ ಲಾಭವನ್ನು ಒದಗಿಸುವಲ್ಲಿ ವಿಫಲಗೊಂಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಈಗ ರಾಜ್ಯಗಳ ನಡುವೆ ಸಂಘರ್ಷಗಳನ್ನು ಹುಟ್ಟುಹಾಕಲು ಅಗ್ಗದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಆರೋಪಿಸಿದ್ದಾರೆ.

ಪ್ರಧಾನಿಯವರ ಬೇಜವಾಬ್ದಾರಿ ಭಾಷಣಗಳು ಮತ್ತು ಅವುಗಳನ್ನು ತಡೆಯುವಲ್ಲಿ ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ದೇಶದ ನಾಗರಿಕರು ಆಘಾತ ಮತ್ತು ನಿರಾಶೆಯೊಂದಿಗೆ ನೋಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದರು.

ಮೋದಿಯವರ ‘ಕಾಲ್ಪನಿಕ ಕಥೆಗಳು ಮತ್ತು ಸುಳ್ಳಿನ ಚೀಲಗಳಿಗಾಗಿ’ ಅವರ ವಿರುದ್ಧ ದಾಳಿ ನಡೆಸಿದ ಸ್ಟ್ಯಾಲಿನ್, ದಕ್ಷಿಣ ರಾಜ್ಯಗಳ ನಾಯಕರು ಉತ್ತರ ಪ್ರದೇಶದ ಜನರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುತ್ತಿದ್ದಾರೆ ಎಂಬ ಪ್ರಧಾನಿಯವರ ಆರೋಪಗಳನ್ನು ಪ್ರಸ್ತಾಪಿಸಿ, ಮೋದಿಯವರು ಪ್ರಧಾನಿ ಹುದ್ದೆಯ ಘನತೆಯನ್ನು ಮರೆತಿದ್ದಾರೆ, ಪ್ರತಿ ದಿನವೂ ಹೊಸ ಸುಳ್ಳನ್ನು ಹರಡುತ್ತಿದ್ದಾರೆ, ಪ್ರತಿ ಗಂಟೆಗೂ ದ್ವೇಷದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಹೇಳಿದರು.

ಎಸ್‌ಪಿ ಮತ್ತು ಕಾಂಗ್ರೆಸ್‌ನ ದಕ್ಷಿಣದ ಮಿತ್ರಪಕ್ಷಗಳು ಉ.ಪ್ರದೇಶ ಮತ್ತು ಸನಾತನ ಧರ್ಮವನ್ನು ಅವಮಾನಿಸಿವೆ,ಆದರೆ ಉಭಯ ಪಕ್ಷಗಳು ಮೌನವಾಗಿವೆ ಎಂದು ಮೋದಿ ಇತ್ತೀಚಿನ ರ್ಯಾಲಿಯೊಂದರಲ್ಲಿ ಆರೋಪಿಸಿದ್ದರು.

ತಮಿಳುನಾಡು ಮತ್ತು ಇತರ ಸಾಮಾಜಿಕ ನ್ಯಾಯ ಆಧಾರಿತ ರಾಜಕೀಯ ಪಕ್ಷಗಳು ಹಿಂದುಳಿದವರು,ದೀನದಲಿತರು ಮತ್ತು ತುಳಿತಕ್ಕೊಳಗಾದ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಗಳ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕಲು ಒತ್ತಾಯಿಸಿವೆ ಎಂದು ಎತ್ತಿ ತೋರಿಸಿದ ಸ್ಟ್ಯಾಲಿನ್,ಈ ಬೇಡಿಕೆಯನ್ನು ಈಗ ರಾಷ್ಟ್ರಮಟ್ಟದಲ್ಲಿ ಎತ್ತಲಾಗುತ್ತಿದ್ದು,ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಅದನ್ನು ಬೆಂಬಲಿಸಿವೆ ಎಂದು ಹೇಳಿದರು.

ಉತ್ತರ ಪ್ರದೇಶದ ಜನರಿಗೆ ಅಪಾರ ಪ್ರಯೋಜನಕಾರಿಯಾಗಬಲ್ಲ ಈ ವಿಷಯದ ಬಗ್ಗೆ ಪ್ರಧಾನಿ ಎಂದಾದರೂ ಮಾತನಾಡಿದ್ದಾರೆಯೇ ಅಥವಾ ಯಾವುದೇ ಗ್ಯಾರಂಟಿಯನ್ನು ನೀಡಿದ್ದಾರೆಯೇ? ಇಲ್ಲ. ಆದರೆ ಅವರು ದ್ವೇಷವನ್ನು ಹರಡುವಲ್ಲಿ ಚುರುಕಾಗಿರುತ್ತಾರೆ ಎಂದು ಹೇಳಿದರು.

ಬಿಜೆಪಿಯು ನಕಲಿ ಸುದ್ದಿಗಳನ್ನು ಬೆಂಬಲಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಿದ ಸ್ಟಾಲಿನ್, ಯೂಟ್ಯೂಬರ್ ಮನೀಷ್ ಕಶ್ಯಪ್ ಉದಾಹರಣೆಯನ್ನು ನೀಡಿದರು.

ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಗೊಂಡಿರುವ ಕಶ್ಯಪ್‌ನನ್ನು ಕಳೆದ ವರ್ಷ ತಮಿಳುನಾಡು ಪೋಲಿಸರು ಬಿಹಾರದ ವಲಸೆ ಕಾರ್ಮಿಕರ ಮೇಲೆ ದಾಳಿಗಳ ಕುರಿತು ನಕಲಿ ವೀಡಿಯೊಗಳನ್ನು ಪ್ರಸಾರ ಮಾಡಿದ್ದ ಆರೋಪದಲ್ಲಿ ಬಂಧಿಸಿದ್ದರು.

ಮೋದಿಯವರ ದ್ವೇಷಪೂರಿತ ಪ್ರಚಾರ ವಿಫಲಗೊಂಡಿದೆ ಮತ್ತು ತನ್ನ ಸರಕಾರದ 10 ವರ್ಷಗಳ ಆಡಳಿತದಲ್ಲಿ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ ಎಂದು ನುಡಿದ ಸ್ಟ್ಯಾಲಿನ್,ಪ್ರತಿಪಕ್ಷಗಳು ಆಳುತ್ತಿರುವ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡುವ ಮೂಲಕ ಮೋದಿ ತಾನು ಬಡವರ ಶತ್ರು ಎನ್ನುವುದನ್ನು ಸ್ವತಃ ಬಹಿರಂಗಗೊಳಿಸಿದ್ದಾರೆ ಎಂದರು.

ಮೋದಿಯವರ ಭಾಷಣಗಳನ್ನು ಕೇಳಿದರೆ ಪ್ರತಿ ಕೆ.ಜಿ ಸತ್ಯದ ಬೆಲೆ ಎಷ್ಟು ಎಂದು ಯಾರಿಗಾದರೂ ಅಚ್ಚರಿಯಾಗುತ್ತದೆ ಎಂದು ಹೇಳಿದ ಸ್ಟಾಲಿನ್, ಬಿಜೆಪಿಯ ವಿಭಜಕ ಕನಸುಗಳು ಎಂದಿಗೂ ನನಸಾಗುವುದಿಲ್ಲ, ಸುಳ್ಳುಗಳನ್ನು ಛಿದ್ರಗೊಳಿಸಲಾಗುವುದು ಮತ್ತು ದ್ವೇಷವನ್ನು ಹಿಮ್ಮೆಟ್ಟಿಸಲಾಗುವುದು. ಭಾರತವು ಮೇಲುಗೈ ಸಾಧಿಸಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News