ಹಜ್ ಕೋಟಾ ಭಾರೀ ಕಡಿತ: ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಸ್ಟಾಲಿನ್ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ / ಎಂಕೆ ಸ್ಟಾಲಿನ್ (Photo: PTI)
ಹೊಸದಿಲ್ಲಿ : 52,000 ಖಾಸಗಿ ಹಜ್ ಸೀಟುಗಳನ್ನು ಹಠಾತ್ ರದ್ದುಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಸೌದಿ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ನಡೆಸಬೇಕು ಮತ್ತು ಶೀಘ್ರವಾದ ಪರಿಹಾರ ಕಂಡು ಹಿಡಿಯಬೇಕು ಎಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.
ಹಜ್ ಕೋಟಾ ರದ್ದತಿಯು ಮುಂಬರುವ ಹಜ್ ಯಾತ್ರೆಗೆ ತಯಾರಿ ನಡೆಸುತ್ತಿದ್ದ ಸಾವಿರಾರು ಭಾರತೀಯ ಮುಸ್ಲಿಂ ಯಾತ್ರಾರ್ಥಿಗಳಿಗೆ ಸಂಕಷ್ಟವನ್ನುಂಟುಮಾಡಿದೆ ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ʼಸೌದಿ ಅರೇಬಿಯಾ ಭಾರತದ ಹಜ್ ಕೋಟಾದಲ್ಲಿ ಹಠಾತ್ ಕಡಿತವನ್ನು ಮಾಡಿದೆ ಎಂದು ತಿಳಿದು ಬಂದಿದೆ. ಖಾಸಗಿ ಹಜ್ ಟೂರ್ ಆಪರೇಟರ್‌ಗಳಿಗೆ ಮೀಸಲಿಟ್ಟ ಸುಮಾರು 52,000 ಹಜ್ ಸೀಟುಗಳನ್ನು ರದ್ದುಗೊಳಿಸಲಾಗಿದೆ. ಈ ಹಠಾತ್ ನಿರ್ಧಾರವು ಈಗಾಗಲೇ ಪಾವತಿಗಳನ್ನು ಪೂರ್ಣಗೊಳಿಸಿದ ಅನೇಕ ಯಾತ್ರಾರ್ಥಿಗಳಲ್ಲಿ ಆತಂಕ ಮತ್ತು ಅನಿಶ್ಚಿತತೆ ಉಂಟು ಮಾಡಿದೆʼ ಎಂದು ಹೇಳಿದರು.
ಖಾಸಗಿ ಹಜ್ ಕೋಟಾದ ಹಠಾತ್ ರದ್ದತಿಯು ಹಜ್ ಯಾತ್ರೆಗೆ ತಯಾರಿ ನಡೆಸುತ್ತಿದ್ದ ತಮಿಳುನಾಡಿನ ಅನೇಕ ಯಾತ್ರಿಗಳು ಸೇರಿದಂತೆ ಸಾವಿರಾರು ಭಾರತೀಯ ಮುಸ್ಲಿಂ ಯಾತ್ರಿಕರಿಗೆ ತೊಂದರೆಯನ್ನುಂಟುಮಾಡುತ್ತಿದೆ. ಈ ಕುರಿತು ಸೌದಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಂತೆ ಸ್ಟಾಲಿನ್ ಆಗ್ರಹಿಸಿದ್ದಾರೆ.