ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ಆಯೋಗ ರಚನೆ

Update: 2025-01-30 20:53 IST
Maha Kumbh Mela

PC : PTI 

  • whatsapp icon

ಲಕ್ನೋ: ಉತ್ತರ ಪ್ರದೇಶ ಸರಕಾರವು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣಗಳನ್ನು ಕಂಡು ಹಿಡಿಯಲು ನಿವೃತ್ತ ನ್ಯಾಯಾಧೀಶ ಹರ್ಷಕುಮಾರ್‌ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ.

ತನಿಖೆಯನ್ನು ಪೂರ್ಣಗೊಳಿಸಲು ಆಯೋಗಕ್ಕೆ ಒಂದು ತಿಂಗಳು ಸಮಯಾವಕಾಶವಿದೆ. ಆದರೆ ಅದನ್ನು ತ್ವರಿತವಾಗಿ ಮುಗಿಸಲು ಆಯೋಗವು ಪ್ರಯತ್ನಿಸಲಿದೆ ಎಂದು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದ ಹರ್ಷಕುಮಾರ್, ಆಯೋಗದ ಸದಸ್ಯರು ಶೀಘ್ರವೇ ಪ್ರಯಾಗರಾಜ್‌ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಹರ್ಷಕುಮಾರ್‌, ಆಯೋಗದ ಇತರ ಸದಸ್ಯರಾದ ಮಾಜಿ ಡಿಜಿಪಿ ವಿ.ಕೆ.ಗುಪ್ತಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಿ.ಕೆ.ಸಿಂಗ್ ಅವರು ಗುರುವಾರ ತಮಗಾಗಿ ನಿಯೋಜಿಸಲಾಗಿರುವ ಕಚೇರಿಗೆ ಹಾಜರಾಗಿ ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ.

ಮೂವರು ಸದಸ್ಯರು ಘಟನೆಯ ಪ್ರತ್ಯೇಕ ಅಂಶಗಳ ಬಗ್ಗೆ ತನಿಖೆ ನಡೆಸಲಿದ್ದಾರೆಯೇ ಎಂಬ ಪ್ರಶ್ನೆಗೆ ಹರ್ಷಕುಮಾರ್‌, ‘ನಾವು ಅದನ್ನು ನಮ್ಮೊಳಗೆ ಚರ್ಚಿಸುತ್ತೇವೆ. ಈಗಲೇ ವಿವರಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ಮೌನಿ ಅಮವಾಸ್ಯೆಯ ದಿನವಾದ ಬುಧವಾರ ನಸುಕಿನಲ್ಲಿ ಮಹಾ ಕುಂಭಮೇಳದ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಪುಣ್ಯಸ್ನಾನ ಮಾಡಲು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದ ಯಾತ್ರಿಗಳ ನೂಕುನುಗ್ಗಲಿನಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 40 ಜನರು ಮೃತಪಟ್ಟಿದ್ದು, 60 ಜನರು ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News