ತರಗತಿಯ ಗೋಡೆಗಳಿಗೆ ಸಗಣಿ ಲೇಪನ ಮಾಡಿದ್ದ ಪ್ರಾಂಶುಪಾಲೆಯ ಕೊಠಡಿಗೆ ಸಗಣಿ ಬಳಿದ ವಿದ್ಯಾರ್ಥಿಗಳು!

Update: 2025-04-16 17:42 IST
ತರಗತಿಯ ಗೋಡೆಗಳಿಗೆ ಸಗಣಿ ಲೇಪನ ಮಾಡಿದ್ದ ಪ್ರಾಂಶುಪಾಲೆಯ ಕೊಠಡಿಗೆ ಸಗಣಿ ಬಳಿದ ವಿದ್ಯಾರ್ಥಿಗಳು!
  • whatsapp icon

ಹೊಸದಿಲ್ಲಿ: ತರಗತಿ ಕೋಣೆಗಳಲ್ಲಿ ಶಾಖವನ್ನು ತಡೆಯಲು ತರಗತಿ ಕೋಣೆಗಳ ಗೋಡೆಗಳಿಗೆ ಹಸುವಿನ ಸಗಣಿ ಲೇಪನ ಮಾಡಿದ ಲಕ್ಷ್ಮೀಬಾಯಿ ಕಾಲೇಜು ಪ್ರಾಂಶುಪಾಲರ ಕ್ರಮವನ್ನು ಪ್ರತಿಭಟಿಸಿ, ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ರೋನಕ್ ಖತ್ರಿ, ಪ್ರಾಂಶುಪಾಲರ ಕಚೇರಿಯ ಗೋಡೆಗಳಿಗೆ ಸಗಣಿ ಮೆತ್ತಿರುವ ಘಟನೆ ಮಂಗಳವಾರ ನಡೆದಿದೆ.

ವಿದ್ಯಾರ್ಥಿಗಳ ತರಗತಿ ಕೋಣೆಗಳಲ್ಲಿ ಬೇಸಿಗೆಯ ಕಾರಣ ಸೆಕೆ ಹೆಚ್ಚಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸಮ್ಮತಿ ಪಡೆಯದೆ ತರಗತಿ ಕೋಣೆಗಳ ಗೋಡೆಗಳಿಗೆ ಸಗಣಿ ಲೇಪಿಸಿದ ರಾಣಿ ಲಕ್ಷ್ಮೀಬಾಯಿ ಕಾಲೇಜು ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲರ ಕ್ರಮವು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಇದರ ಬೆನ್ನಿಗೇ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಪ್ರತ್ಯುಷ್ ವತ್ಸಲ, ಕಾಲೇಜು ಸಿಬ್ಬಂದಿಗಳ ನೇತೃತ್ವದಲ್ಲಿನ ಸುಸ್ಥಿರ ತಂಪಾಗಿಸುವಿಕೆ ವಿಧಾನಗಳ ಸಂಶೋಧನಾ ಯೋಜನೆಯ ಭಾಗವಾಗಿ ಈ ಕ್ರಮ ಅನುಸರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

Full View

ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರ ಈ ಕ್ರಮವನ್ನು ಪ್ರತಿಭಟಿಸಿ, ಮಂಗಳವಾರ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ರೋನಕ್ ಖೇತ್ರಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಅವರ ಕಚೇರಿಯ ಗೋಡೆಗಳಿಗೆ ಸಗಣಿ ಮೆತ್ತಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರೋನಕ್ ಖತ್ರಿ ನೇತೃತ್ವದ ಗುಂಪೊಂದು ಪ್ರಾಂಶುಪಾಲರ ಕಚೇರಿಯ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು, ಅವರ ಉತ್ತರದಾಯಿತ್ವಕ್ಕೆ ಆಗ್ರಹಿಸುತ್ತಿರುವುದು ಹಾಗೂ ತರಗತಿ ಕೋಣೆಯ ಗೋಡೆಗಳಿಗೆ ಸಗಣಿ ಮೆತ್ತಲು ವಿದ್ಯಾರ್ಥಿಗಳ ಸಮ್ಮತಿ ಪಡೆಯದಿರುವುದರ ಬಗ್ಗೆ ಪ್ರಶ್ನಿಸುತ್ತಿರುವುದು ಸೆರೆಯಾಗಿದೆ.

ನಂತರ, ಈ ಕುರಿತು ಪ್ರತಿಕ್ರಿಯಿಸಿದ ರೋನಕ್ ಖತ್ರಿ, "ಇಂತಹ ಉಪಕ್ರಮ ಕೈಗೊಳ್ಳಲು ವಿದ್ಯಾರ್ಥಿಗಳಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ. ನಿಮಗೆ ಸಂಶೋಧನೆ ಮಾಡಬೇಕಿದ್ದರೆ, ಅದನ್ನು ಮನೆಯಲ್ಲಿ ಮಾಡಿ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತದನಂತರ, ಘಟನೆಯ ಕುರಿತು ಎಕ್ಸ್‌ನಲ್ಲೂ ಪೋಸ್ಟ್ ಮಾಡಿರುವ ರೋನಕ್ ಖತ್ರಿ, "ನಾವು ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲರ ಕಚೇರಿಯ ಗೋಡೆಗಳಿಗೂ ಸಗಣಿ ಬಳಿಯುವ ಮೂಲಕ, ಅವರಿಗೆ ನೆರವು ನೀಡಲು ಅಲ್ಲಿಗೆ ತೆರಳಿದ್ದೆವು. ಇದೀಗ ಪ್ರಾಂಶುಪಾಲರು ತಮ್ಮ ಕಚೇರಿಯಲ್ಲಿರುವ ಹವಾನಿಯಂತ್ರಣ ಸಾಧನವನ್ನು ತೆಗೆದು, ಅದನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುತ್ತಾರೆ ಹಾಗೂ ಗೋ ಸಗಣಿ ಮೆತ್ತಿದ ಈ ಆಧುನಿಕ ಹಾಗೂ ನೈಸರ್ಗಿಕ ತಂಪು ವಾತಾವರಣದಲ್ಲಿ ಕಾಲೇಜನ್ನು ನಡೆಸಲಿದ್ದಾರೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಛೇಡಿಸಿದ್ದಾರೆ.

ತಮ್ಮ ಕ್ರಮದ ವಿರುದ್ಧ ಕೇಳಿ ಬಂದಿರುವ ಟೀಕೆಗೆ ರವಿವಾರ ಪ್ರತಿಕ್ರಿಯೆ ನೀಡಿದ ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲ, ಈ ಕ್ರಮವು ಕಾಲೇಜಿನ ಸಿಬ್ಬಂದಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸುಸ್ಥಿರ ತಂಪಾಗಿಸುವಿಕೆ ವಿಧಾನಗಳ ದೇಶೀಯತೆಯನ್ನು ಅನ್ವೇಷಿಸುತ್ತಿರುವ ಸಂಶೋಧನಾ ಯೋಜನೆಯ ಭಾಗವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. "ಈ ಸಂಶೋಧನೆಯು ಪ್ರಗತಿಯಲ್ಲಿದೆ. ಒಂದು ವಾರದ ನಂತರ ನಾನು ಸಂಪೂರ್ಣ ಸಂಶೋಧನೆಯ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ" ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿರುವ ಅವರು, "ನನ್ನ ಕ್ರಮವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ" ಎಂದೂ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News