ಮುಂದಿನ ಮಂಗಳವಾರ ಈಗಿನ ಸ್ಥಿತಿಗತಿ ವರದಿ ಸಲ್ಲಿಸಿ: ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ : ಕೋಲ್ಕತ್ತಾ ವೈದ್ಯೆಯ ಕೊಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಮುಂದಿನ ಮಂಗಳವಾರ ಈಗಿನ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಕಳೆದ ತಿಂಗಳು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಕೈಗೆತ್ತಿಕೊಡಿದೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ, ಪೀಠವು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ಸಂಸ್ಥೆಯಾದ ಸಿಬಿಐಗೆ ಇದುವರೆಗಿನ ತನಿಖೆಯ ಸ್ಥಿತಿ ವರದಿಯನ್ನು ಕೇಳಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಆಸ್ಪತ್ರೆಗೆ ನುಗ್ಗಿದ ಸಾವಿರಾರು ಜನರ ತನಿಖೆಯ ಸ್ಥಿತಿಗತಿ ವರದಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿದೆ.
ಕೇಂದ್ರೀಯ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರೆ, ಪಶ್ಚಿಮ ಬಂಗಾಳ ಸರ್ಕಾರವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿನಿಧಿಸುತ್ತಿದ್ದಾರೆ.
ಆಗಸ್ಟ್ 9 ರಂದು ಕರ್ತವ್ಯ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪಶ್ಚಿಮ ಬಂಗಾಳ ಮತ್ತು ದೇಶದ ಇತರ ಭಾಗಗಳಾದ್ಯಂತ ಸಾವಿರಾರು ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿದೆ.