ಅನಾವೃಷ್ಟಿ ಆತಂಕ: ಆರು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೇರಿದ ಸಕ್ಕರೆ ಬೆಲೆ
ಹೊಸದಿಲ್ಲಿ: ಮುಂಗಾರು ವೈಫಲ್ಯದಿಂದಾಗಿ ದೇಶದಲ್ಲಿ ಅನಾವೃಷ್ಟಿ ಆತಂಕದ ಕಾರ್ಮೋಡ ಕವಿದಿರುವ ನಡುವೆಯೇ ಮಂಗಳವಾರ ಸಕ್ಕರೆ ಬೆಲೆ ಆರು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಹಬ್ಬದ ಸೀಸನ್ ಕಾರಣದಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆಯ ನಡುವೆಯೇ ದೇಶದಲ್ಲಿ ಸಕ್ಕರೆ ದಾಸ್ತಾನು ಸಾಕಷ್ಟು ಇದೆ ಎಂದು ಸರ್ಕಾರ ಹೇಳಿದೆ.
ಮಳೆ ಅಭಾವದಿಂದಾಗಿ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಲ್ಪಾವಧಿ ಕಬ್ಬಿನ ಬೆಳೆಯ ಇಳುವರಿ ಕಡಿಮೆಯದಲ್ಲಿ, ಸರ್ಕಾರ ಅಕ್ಟೋಬರ್ 1 ರಿಂದ ಆರಂಭವಾಗುವ ಹೊಸ ಹಂಗಾಮಿನಲ್ಲಿ ಸಕ್ಕರೆ ರಫ್ತನ್ನು ರದ್ದುಪಡಿಸಬೇಕಾದ ಅನಿವಾರ್ಯತೆಗೆ ಸಿಲುಕುವ ಅಪಾಯವಿದೆ.
ವಿಶ್ವದಲ್ಲೇ ಗರಿಷ್ಠ ಸಕ್ಕರೆ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈಗಾಗಲೇ ಹೆಚ್ಚುತ್ತಿರುವ ಹಣದುಬ್ಬರ ಆತಂಕಕ್ಕೆ ಕಾತರಣವಾಗಿದೆ. ಆಹಾರವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇಕಡ 7.44ಕ್ಕೆ ಹೆಚ್ಚಿದ್ದು, ಇದು 15 ತಿಂಗಳಲ್ಲೇ ಗರಿಷ್ಠ ಎನಿಸಿದೆ.
ಬೆಲೆ ಏರಿಕೆಯ ಕಾರಣದಿಂದಾಗಿ ಈಗಾಗಲೇ ಭಾರತ ಅಕ್ಕಿ ಮತ್ತು ಗೋಧಿಯನ್ನು ಹೊರದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಿದೆ. ಈರುಳ್ಳಿ ರಫ್ತಿನ ಮೇಲೆ ಶೇಕಡ 40ರಷ್ಟು ಸುಂಕ ವಿಧಿಸಲಾಗಿದೆ. ಬೇಳೆ ಕಾಳುಗಳನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಅನಾವೃಷ್ಟಿ ಕಾರಣದಿಂದ ಕಬ್ಬಿನ ಇಳುವರಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘ ಕಳೆದ ವಾರ ಅಂದಾಜಿಸಿತ್ತು.
ಮಂಗಳವಾರ ಸಕ್ಕರೆ ಬೆಲೆ ಟನ್ ಗೆ 37,750 ರೂಪಾಯಿ ಆಗಿದ್ದು, ಕಳೆದ 15 ದಿನಗಳಲ್ಲಿ ಬೆಲೆ ಶೇಕಡ 2.9ರಷ್ಟು ಹೆಚ್ಚಿದೆ. ಇದು 2017ರ ಬಳಿಕ ದಾಖಲಾದ ಗರಿಷ್ಠ ಬೆಲೆಯಾಗಿದೆ. ಪ್ರಸಕ್ತ ಋತುವಿನಲ್ಲಿ ಭಾರತ 61 ಲಕ್ಷ ಟನ್ ಸಕ್ಕರೆ ರಫ್ತು ಮಾಡಿದ್ದು, ಈ ಹಿಂದಿನ ವರ್ಷ 111 ಟನ್ ಸಕ್ಕರೆ ರಫ್ತು ಮಾಡಲಾಗಿತ್ತು.