ಆಸ್ತಿಗಳನ್ನು ಘೋಷಿಸಿದ 27 ನ್ಯಾಯಾಧೀಶರ ಹೆಸರು ಪ್ರಕಟಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ ಹಾಲಿ 33 ನ್ಯಾಯಾಧೀಶರ ಪೈಕಿ 27 ಜನರು ತಮ್ಮ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಿಗೆ ಘೋಷಿಸಿದ್ದಾರೆ. ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ನ್ಯಾಯಾಧೀಶರ ಹೆಸರುಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ ಅವರ ಆಸ್ತಿ ಘೋಷಣೆಗಳನ್ನು ಬಹಿರಂಗಗೊಳಿಸಲಾಗಿಲ್ಲ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಕಾನೂನು ಮತ್ತು ನ್ಯಾಯ ಕುರಿತು ಸಂಸದೀಯ ಸಮಿತಿಯು ಕಳೆದ ವರ್ಷ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯವಾಗಿಸಲು ಶಾಸನಕ್ಕಾಗಿ ಶಿಫಾರಸು ಮಾಡಿತ್ತು.
ಗಮನಾರ್ಹವಾಗಿ, 55 ಮಾಜಿ ನ್ಯಾಯಾಧೀಶರ ಆಸ್ತಿ ಘೋಷಣೆಗಳು ಕೆಲವು ತಿಂಗಳುಗಳ ಹಿಂದಿನವರೆಗೂ ಸಾರ್ವಜನಿಕ ಡೋಮೇನ್‌ನಲ್ಲಿ ಲಭ್ಯವಿದ್ದವು. ಆದರೆ ಹಾಲಿ ನ್ಯಾಯಾಧೀಶರ ಆಸ್ತಿ ಘೋಷಣೆಗಳು ಲಭ್ಯವಿರಲಿಲ್ಲ. ಈಗ ಆ ಘೋಷಣೆಗಳನ್ನೂ ಸಾರ್ವಜನಿಕ ಡೊಮೇನ್‌ನಿಂದ ತೆಗೆದುಹಾಕಲಾಗಿದೆ.
ಆ.7ರಂದು ವೆಬ್‌ಸೈಟ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ನಿವೃತ್ತರಾಗಿರುವವರ ದಾಖಲೆಗಳನ್ನು ತೆಗೆಯಲಾಗಿದೆ. ಅಲ್ಲದೆ ನ್ಯಾಯಾಧೀಶರೋರ್ವರು ಪ್ರಮಾಣ ವಚನ ಸ್ವೀಕರಿಸಿದಾಗ ಆಸ್ತಿಗಳನ್ನು ಘೋಷಿಸಲಾಗುತ್ತದೆ ಮತ್ತು ದಾಖಲೆಗಳನ್ನು ಸರ್ವೋಚ್ಚ ನ್ಯಾಯಾಲಯದ ಕಚೇರಿಯು ನಿರ್ವಹಿಸುತ್ತದೆ. ಆದರೂ ಸಾರ್ವಜನಿಕ ಬಹಿರಂಗಪಡಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುತ್ತದೆ ಮತ್ತು ಇದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಸುದ್ದಿಸಂಸ್ಥೆಯು ಸಂಪರ್ಕಿಸಿದ ಸುಪ್ರೀಂ ಕೋರ್ಟ್ ಅಧಿಕಾರಿಯೋರ್ವರು ತಿಳಿಸಿದರು.
ತಮ್ಮ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಘೋಷಿಸಿರುವ 27 ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರೂ ಸೇರಿದ್ದಾರೆ.
2009, ಸೆ.8ರಂದು ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯವು, ಎಲ್ಲ ನ್ಯಾಯಾಧೀಶರು 2009, ಅ.31ರೊಳಗೆ ತಮ್ಮ ಆಸ್ತಿ ವಿವರಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಘೋಷಿಸಬೇಕು ಎಂಬ ನಿರ್ಣಯವನ್ನು ತೆಗೆದುಕೊಂಡಿತ್ತು. ಇದು ಸ್ವಯಂಪ್ರೇರಿತ ಕ್ರಮವಾಗಿರುತ್ತದೆ ಎಂದು ಹೇಳಿತ್ತು. ಬಳಿಕ ನ್ಯಾಯಾಧೀಶರ ಆಸ್ತಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು. ಆದರೆ 2018, ಮಾ.31ರ ಬಳಿಕ ಇದನ್ನು ನಿಲ್ಲಿಸಲಾಗಿತ್ತು.
ಕಳೆದ ವರ್ಷದ ಆ.28ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ 2022-24ರ ಅವಧಿಗೆ ತಮ್ಮ ಆಸ್ತಿಗಳನ್ನು ಘೋಷಿಸಿರದ ನ್ಯಾಯಾಧೀಶರ ವಿವರಗಳು ಮತ್ತು ಸಂಬಂಧಿತ ಅಧಿಕೃತ ಪತ್ರ ವ್ಯವಹಾರಗಳ ಮಾಹಿತಿಯನ್ನು ಕೋರಿ ಆರ್‌ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿತ್ತು.
ಕೇಳಲಾಗಿರುವ ಮಾಹಿತಿಯು ಆರ್‌ಟಿಐ ಕಾಯ್ದೆಯಡಿ ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಆರ್‌ಟಿಐ ಅರ್ಜಿಗೆ ಉತ್ತರದಲ್ಲಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಪತ್ರಿಕೆಯು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದು, ಸಿಪಿಐಒ ಉತ್ತರವನ್ನು ಅದು ಎತ್ತಿ ಹಿಡಿದಿತ್ತು.