ಪ್ರಧಾನಿ ಪದವಿ ಕುರಿತ ಹೇಳಿಕೆ ಪ್ರಕರಣ | ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಗುಜರಾತ್ ವಿಶ್ವವಿದ್ಯಾನಿಲಯ ಸಲ್ಲಿಸಿದ ಕ್ರಿಮಿನಲ್ ಮಾನ ಹಾನಿ ಪ್ರಕರಣದಲ್ಲಿ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಗುಜರಾತ್ ಉಚ್ಛ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಈ ಪ್ರಕರಣ ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆಯ ಕುರಿತು ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ಸಂಬಂಧಿಸಿದೆ.
ನ್ಯಾಯಮೂತಿಗಳಾದ ಹೃಷಿಕೇಶ್ ರಾಯ್ ಹಾಗೂ ಎಸ್ವಿಎನ್ ಭಟ್ಟಿ ಅವರನ್ನು ಒಳಗೊಂಡ ಪೀಠ, ಇದೇ ರೀತಿ ಆಪ್ ನಾಯಕ ಸಂಜಯ್ ಸಿಂಗ್ ಸಲ್ಲಿಸಿದ ಅರ್ಜಿಯನ್ನು 2024 ಎಪ್ರಿಲ್ 8ರಂದು ತಿರಸ್ಕರಿಸಲಾಗಿದೆ ಎಂದು ಹೇಳಿತು.
ಅರವಿಂದ್ ಕೇಜ್ರಿವಾಲ್ ಪರ ನ್ಯಾಯವಾದಿ, ಈ ಮಾನ ಹಾನಿ ಪ್ರಕರಣಕ್ಕೆ ಅರ್ಹತೆಯ ಕೊರತೆ ಇದೆ ಎಂದು ಪ್ರತಿಪಾದಿಸಿದರು. ಗುಜರಾತ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ನೇರವಾಗಿ ಉಲ್ಲೇಖಿಸದೆ ದೂರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರವಿಂದ್ ಕೇಜ್ರಿವಾಲ್ ಅವರು ಮಾನ ಹಾನಿಕರ ಹಾಗೂ ಅಜಾಗರೂಕತೆಯ ಹೇಳಿಕೆ ನೀಡುವ, ಅನಂತರ ಕ್ಷಮಿಸುವಂತೆ ಕೋರುವ ಅಭ್ಯಾಸ ಹೊಂದಿದ್ದಾರೆ ಎಂದರು.
ಕೇಜ್ರಿವಾಲ್ ಅವರ ಕಾನೂನು ತಜ್ಞರ ತಂಡ ಸಂಬಂಧಿತ ಕಾನೂನು ನಿಯಮಗಳನ್ನು ಪ್ರಸ್ತಾವಿಸಿದರೂ ನ್ಯಾಯಾಲಯ ಈ ಹಿಂದಿನ ಸಂಜಯ್ ಸಿಂಗ್ ಅರ್ಜಿ ಕೇಜ್ರಿವಾಲ್ ಅವರ ಅರ್ಜಿಯನ್ನು ತಿರಸ್ಕರಿಸುವ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ಸ್ಪಷ್ಟಪಡಿಸಿತು.
‘‘ನಾವು ಸ್ಥಿರವಾದ ನಿಲುವನ್ನು ಹೊಂದಿರಬೇಕಾಗುತ್ತದೆ’’ ಎಂದು ಪೀಠ ಹೇಳಿತು. ಅನಂತರ, ನಾವು ಪ್ರಕರಣದ ಅರ್ಹತೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರ್ಜಿಯನ್ನು ಪರಿಗಣಿಸದಿರಲು ಮಾತ್ರ ಬಯಸಿದ್ದೇವೆ ಎಂದು ಹೇಳಿತು.