ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ: ಪಶ್ಚಿಮ ಬಂಗಾಳದಿಂದ ವಿಚಾರಣೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಹೊಸದಿಲ್ಲಿ: ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಪಶ್ಚಿಮ ಬಂಗಾಳದಿಂದ ಹೊರಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಮರು ತನಿಖೆಗೆ ಆದೇಶಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಸಾಕಷ್ಟು ಅಧಿಕಾರವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಹೇಳಿದೆ. ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ ಸ್ಥಿತಿ ವರದಿಯನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ಪರಿಶೀಲಿಸಿದೆ.
ಪಶ್ಚಿಮ ಬಂಗಾಳದಿಂದ ವಿಚಾರಣೆಯನ್ನು ಸ್ಥಳಾಂತರಿಸಲು ನ್ಯಾಯಾಲಯದ ಮುಂದೆ ಮೌಖಿಕ ಮನವಿಯನ್ನು ಸಲ್ಲಿಸಿದಾಗ, ನ್ಯಾಯಾಲಯವು ಅಂತಹ ಯಾವುದೇ ಆದೇಶವನ್ನು ನೀಡುವುದಿಲ್ಲ ಎಂದು ಮೌಖಿಕವಾಗಿ ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ, ವಕೀಲರೋರ್ವರು ಗೊಂದಲಕಾರಿ ಸನ್ನಿವೇಶ ನಿರ್ಮಾಣವಾಗಿರುವುದರಿಂದ ವಿಚಾರಣೆಯನ್ನು ರಾಜ್ಯದಿಂದ ಸ್ಥಳಾಂತರಿಸಬೇಕು ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್, ಹೌದು, ಮಣಿಪುರದಂತಹ ಪ್ರಕರಣಗಳಲ್ಲಿ ನಾವು ಮಾಡಿದ್ದೇವೆ. ಆದರೆ ನಾವು ಇಲ್ಲಿ ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಜನರು ರಾಜ್ಯದ ನ್ಯಾಯಾಂಗ ಮತ್ತು ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಇನ್ನೋರ್ವ ವಕೀಲರು ಹೇಳಿದಾಗ, ಸಿಜೆಐ ಛೀಮಾರಿ ಹಾಕಿದ್ದು,ಇಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದಾರೆ. ಸಿಬಿಐ ಸರಿಯಾದ ತನಿಖೆ ನಡೆಸಿಲ್ಲ ಮತ್ತು ರಾಜ್ಯ ಪೊಲೀಸರ ವರದಿಯನ್ನೇ ಸಿಬಿಐ ಅನುಮೋದಿಸಿದೆ ಎಂದು ವಕೀಲರು ಹೇಳಿದಾಗ ಈ ಕುರಿತು ಮುಂದಿನ ತನಿಖೆಗೆ ಆದೇಶಿಸಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿಜೆಐ ಹೇಳಿದ್ದಾರೆ.