ರೈತರ ಪ್ರತಿಭಟನೆ | ಆಸ್ಪತ್ರೆಗೆ ದಲ್ಲೆವಾಲ್ ಸ್ಥಳಾಂತರ ಕುರಿತು ವಿಚಾರಣೆ ಮುಂದೂಡಿದ ಸುಪ್ರೀಂ

Update: 2024-12-31 15:28 GMT

 ಸುಪ್ರೀಂ ಕೋರ್ಟ್‌ | PTI 

ಹೊಸದಿಲ್ಲಿ : ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ 35 ದಿನಗಳಿಂದಲೂ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತನ್ನ ಆದೇಶ ಪಾಲನೆ ಕುರಿತು ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಜ.2ರವರೆಗೆ ಮುಂದೂಡಿದೆ.

ಪಂಜಾಬ್ ಸರಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ನ್ಯಾಯಾಲಯದ ಡಿ.20ರ ಆದೇಶ ಪಾಲನೆಗೆ ಹೆಚ್ಚಿನ ಸಮಯಾವಕಾಶವನ್ನು ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠವು ಮುಂದಿನ ವಿಚಾರಣೆಯನ್ನು ಜ.2ಕ್ಕೆ ನಿಗದಿಗೊಳಿಸಿತು.

ಸಂಧಾನಕಾರರ ತಂಡವೊಂದು ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ಖನೌರಿ ಗಡಿಯ ಪಂಜಾಬ್ ಪಾರ್ಶ್ವದಲ್ಲಿಯ ಸಮೀಪದ ತಾತ್ಕಾಲಿಕ ಆಸ್ಪತ್ರೆಗೆ ದಲ್ಲೆವಾಲರನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಿಂಗ್ ತಿಳಿಸಿದರು.

ಪ್ರತಿಭಟನಾನಿರತ ರೈತರೊಂದಿಗೆ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಲು ತಾನು ಬಯಸುವುದಿಲ್ಲ ಮತ್ತು ತನ್ನ ಹಿಂದಿನ ಆದೇಶದ ಪಾಲನೆಯನ್ನು ಮಾತ್ರ ಬಯಸುತ್ತಿದ್ದೇನೆ ಎಂದು ಹೇಳಿದ ಪೀಠವು,ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡು ವಿಷಯದ ವಿಚಾರಣೆಯನ್ನು ಮುಂದೂಡಿತು.

ದಲ್ಲೆವಾಲರನ್ನು ಆಸ್ಪತ್ರೆಗೆ ಸ್ಥಳಾಂತರಿಸದ್ದಕ್ಕಾಗಿ ಡಿ.28ರಂದು ಪಂಜಾಬ್ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ದಲ್ಲೆವಾಲರಿಗೆ ವೈದ್ಯಕೀಯ ನೆರವಿನ ಲಭ್ಯತೆಯನ್ನು ಪ್ರತಿರೋಧಿಸುತ್ತಿದ್ದಕ್ಕಾಗಿ ಪ್ರತಿಭಟನಾನಿರತ ರೈತರ ಉದ್ದೇಶವನ್ನೂ ಶಂಕಿಸಿತ್ತು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದಲ್ಲೆವಾಲ್ ನ.26ರಿಂದ ಪಂಜಾಬ್ ಮತ್ತು ಹರ್ಯಾಣ ನಡುವಿನ ಖನೌರಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ಫೆ.13ರಂದು ದಿಲ್ಲಿಗೆ ತಮ್ಮ ಜಾಥಾವನ್ನು ಭದ್ರತಾ ಪಡೆಗಳು ತಡೆದಾಗಿನಿಂದಲೂ ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ ಮಜ್ದೂರ್ ಮೋರ್ಚಾಗಳ ನೇತೃತ್ವದಲ್ಲಿ ಪ್ರತಿಭಟನಾನಿರತ ರೈತರು ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News