ಅಂಗವೈಕಲ್ಯ ಹೊಂದಿರುವ ಎಲ್ಲ ವ್ಯಕ್ತಿಗಳು ಪರೀಕ್ಷೆಗಳಲ್ಲಿ ಬರಹಗಾರರನ್ನು ಹೊಂದಲು ಅರ್ಹರು: ಸುಪ್ರೀಂ ಕೋರ್ಟ್

Update: 2025-02-04 21:43 IST
Supreme court of India

ಸುಪ್ರೀಂ ಕೋರ್ಟ್ | PTI  

  • whatsapp icon

ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ ಅಂಗವೈಕಲ್ಯಗಳನ್ನು ಹೊಂದಿರುವ ಎಲ್ಲ ವ್ಯಕ್ತಿಗಳಿಗೆ ಅವರ ವೈಕಲ್ಯ ಸ್ಥಿತಿ ಏನೇ ಇದ್ದರೂ ಲಿಪಿಕಾರರು ಅಥವಾ ಬರಹಗಾರರು ಮತ್ತು ಹೆಚ್ಚುವರಿ ಸಮಯ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾನ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದೆ.

ನಿಗದಿತ ಮಾನದಂಡ ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಶೇ.40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವವರ ನಡುವಿನ ವ್ಯತ್ಯಾಸಗಳನ್ನು ನಿವಾರಿಸಲು 2022ರ ಸುತ್ತೋಲೆಯನ್ನು ಪರಿಷ್ಕರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಆದೇಶಿಸಿತು. ಪ್ರಸ್ತುತ ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ನಿರ್ದಿಷ್ಟ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ತಮಗಾಗಿ ಲಿಪಿಕಾರರು ಅಥವಾ ಬರಹಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳ ಅಂಗವೈಕಲ್ಯದ ತೀವ್ರತೆಯ ಆಧಾರದಲ್ಲಿ ಲಿಪಿಕಾರರು ಅಥವಾ ಹೆಚ್ಚುವರಿ ಸಮಯವನ್ನು ನಿರಾಕರಿಸುವುದು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ(ಆರ್ಪಿಡಬ್ಲ್ಯುಡಿಎ)ಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಹೇಳಿತು.

ತನಗೆ ಪರೀಕ್ಷೆಯಲ್ಲಿ ಈ ಸೌಲಭ್ಯಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ‘ಫೋಕಲ್ ಹ್ಯಾಂಡ್ ಡಿಸ್ಟೋನಿಯಾ ’ ಎಂಬ ವೈಕಲ್ಯವನ್ನು ಹೊಂದಿರುವ ವ್ಯಕ್ತಿಯೋರ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಖಾಸಗಿ ನೇಮಕಾತಿ ಸಂಸ್ಥೆಗಳು ಆರ್ಪಿಡಬ್ಲ್ಯುಡಿ ಕಾಯ್ದೆಯಿಂದ ವಿನಾಯಿತಿ ಹೊಂದಿವೆ ಎಂಬ ಪ್ರತಿವಾದಿ ಪರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಮೂಲಭೂತ ಹಕ್ಕುಗಳು ಖಾಸಗಿ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಎತ್ತಿ ಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News