ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು: ವಜಾಗೊಂಡ ಪಶ್ಚಿಮ ಬಂಗಾಳ ಶಿಕ್ಷಕರಿಗೆ ಸುಪ್ರೀಂ ಕೋರ್ಟ್ ರಿಲೀಫ್

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿದ್ಯಾರ್ಥಿಗಳು ತೊಂದರೆ ಅನುಭವಿಸಬಾರದು ಎಂದು ಗುರುವಾರ ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು,ನೇಮಕಾತಿಯಲ್ಲಿ ಅಕ್ರಮಗಳಿಂದಾಗಿ ಈ ತಿಂಗಳ ಆರಂಭದಲ್ಲಿ ವಜಾಗೊಂಡಿದ್ದ ಶಿಕ್ಷಕರು ಹೊಸ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಿದೆ. ಆದರೆ 2016ರ ನೇಮಕಾತಿಗಳ ಕುರಿತು ತನಿಖೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳಿಂದ ಕಳಂಕಿತರಲ್ಲದ ಶಿಕ್ಷಕರಿಗೆ ಮಾತ್ರ ಈ ಅವಕಾಶ ಸೀಮಿತವಾಗಿದೆ. ಸರ್ವೋಚ್ಚ ನ್ಯಾಯಾಲಯವು ಒದಗಿಸಿರುವ ಪರಿಹಾರವು 9,10,11 ಮತ್ತು 12ನೇ ತರಗತಿಗಳ ಶಿಕ್ಷಕರಿಗೆ ಅನ್ವಯಿಸುತ್ತದೆ.
ಸರ್ವೋಚ್ಚ ನ್ಯಾಯಾಲಯವು ಹೊಸ ನೇಮಕಾತಿಗಳಿಗಾಗಿ ಬಂಗಾಳ ಶಾಲಾ ಸೇವಾ ಅಯೋಗ(ಎಸ್‌ಎಸ್‌ಸಿ)ಕ್ಕೆ ಗಡುವನ್ನು ವಿಧಿಸಿದೆ.
‘9ರಿಂದ 12ನೇ ತರಗತಿವರೆಗಿನ ಸಹಾಯಕ ಶಿಕ್ಷಕರಿಗೆ ಸಂಬಂಧಿಸಿದಂತೆ ಅರ್ಜಿಯಲ್ಲಿ ಮಾಡಲಾಗಿರುವ ಮನವಿಯನ್ನು ನಾವು ಪುರಸ್ಕರಿಸುತ್ತೇವೆ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಅವರು,ಎಸ್‌ಎಸ್‌ಸಿ ಹೊಸ ನೇಮಕಾತಿಗಳಿಗಾಗಿ ಮೇ 31ರೊಳಗೆ ಜಾಹೀರಾತನ್ನು ಬಿಡುಗಡೆಗೊಳಿಸಬೇಕು ಮತ್ತು ಡಿ.31ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈ ಬಗ್ಗೆ ರಾಜ್ಯ ಸರಕಾರ ಮತ್ತು ಎಸ್‌ಎಸ್‌ಸಿ ಮೇ 31ರೊಳಗೆ ಜಾಹೀರಾತು ಪ್ರತಿಯನ್ನು ಲಗತ್ತಿಸಿದ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯವು,ಮೇ 31ರೊಳಗೆ ಜಾಹೀರಾತು ಪ್ರಕಟಗೊಳ್ಳದಿದ್ದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿತು.
ಸರ್ವೋಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ಪರಿಹಾರವು ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ. ಎ.7ರಂದು ನ್ಯಾಯಾಲಯದಿಂದ ವಜಾಗೊಂಡ 25,000ಕ್ಕೂ ಅಧಿಕ ಉದ್ಯೋಗಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸಿಬ್ಬಂದಿಗಳೂ ಸೇರಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಎ.7ರ ತೀರ್ಪಿನಿಂದಾಗಿ ಹಲವಾರು ಶಿಕ್ಷಕರು ವಜಾಗೊಂಡ ಬಳಿಕ ಪ.ಬಂಗಾಳದ ಹಲವಾರು ಸರಕಾರಿ ಶಾಲೆಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ನಡುವೆ ಗುರುವಾರದ ಆದೇಶ ಹೊರಬಿದ್ದಿದೆ. ಬಿಕ್ಕಟ್ಟಿಗೆ ಪರಿಹಾರವನ್ನು ಕೋರಿ ಪ.ಬಂಗಾಳ ಸರಕಾರ ಮತ್ತು ಎಸ್‌ಎಸ್‌ಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದವು.