ನ್ಯಾಯಾಂಗದ ವಿರುದ್ಧ ಹೇಳಿಕೆ | ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾದ ಇನ್ನೋರ್ವ ಸುಪ್ರೀಂ ವಕೀಲ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ನ್ಯಾಯಾಂಗ ವಿರೋಧಿ ಹೇಳಿಕೆಗಾಗಿ ಬಿಜೆಪಿ ಸಂಸದ ನಿಶಿಕಾಂತ ದುಬೆ ನ್ಯಾಯಾಂಗ ನಿಂದನೆ ಕ್ರಮಕ್ಕೆ ಗುರಿಯಾಗುವ ಸಾಧ್ಯತೆ ಇನ್ನಷ್ಟು ಹೆಚ್ಚಿದೆ. ಸೋಮವಾರ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀಕುಮಾರ್ ತ್ರಿಪಾಠಿಯವರು ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸಲು ಅನುಮತಿ ಕೋರಿ ಅಟಾರ್ನಿ ಜನರಲ್ (ಎಜಿ)ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ದುಬೆ ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯ ಮತ್ತು ಭಾರತದ ಮುಖ್ಯ ನ್ಯಾಯಾಧೀಶರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುವ ಹೇಳಿಕೆಗಳನ್ನು ನೀಡಿದ್ದು,ಬಿಜೆಪಿ ಈ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದೆ.
ರವಿವಾರ ಸರ್ವೋಚ್ಚ ನ್ಯಾಯಾಲಯದ ಇನ್ನೋರ್ವ ವಕೀಲ ಅನಾಸ್ ತನ್ವೀರ್ ಅವರು ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಿ ಎಜಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
►ನಮ್ಮ ಅನುಮತಿ ಬೇಕಿಲ್ಲ:ಸುಪ್ರೀಂ ಕೋರ್ಟ್
ಈ ನಡುವೆ ಸರ್ವೋಚ್ಚ ನ್ಯಾಯಾಲಯವು ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತನ್ನ ಅನುಮತಿಯ ಅಗತ್ಯವಿಲ್ಲ ಎಂದು ಅರ್ಜಿದಾರರೋರ್ವರಿಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎ.ಜಿ.ಮಸಿಹ್ ಅವರ ಪೀಠದ ಮುಂದೆ ವಿಷಯವನ್ನು ಉಲ್ಲೇಖಿಸಲಾಗಿತ್ತು.
ದುಬೆಯವರ ಹೇಳಿಕೆಗಳ ಕುರಿತು ಇತ್ತೀಚಿನ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಅನುಮತಿಯೊಂದಿಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲು ತಾನು ಬಯಸಿರುವುದಾಗಿ ನಿವೇದಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಗವಾಯಿ,‘ನೀವು ಅರ್ಜಿಯನ್ನು ಸಲ್ಲಿಸಿ. ಅದಕ್ಕಾಗಿ ನಮ್ಮ ಅನುಮತಿಯ ಅಗತ್ಯವಿಲ್ಲ ’ ಎಂದು ತಿಳಿಸಿದರು.
ಈ ವಿಷಯದಲ್ಲಿ ಅರ್ಜಿದಾರರು ಅಟಾರ್ನಿ ಜನರಲ್ ಅನುಮತಿಯನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಪೀಠವು ಹೇಳಿತು.