ಪ್ರವಾಸಿಗಳ ರಕ್ಷಣೆಗೆ ಸುರಕ್ಷಾ ಕ್ರಮ ಕೋರಿ ಸುಪ್ರೀಂಗೆ ಪಿಐಎಲ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಮುಖ್ಯವಾಗಿ ಬೆಟ್ಟ ರಾಜ್ಯಗಳು ಹಾಗೂ ದುರ್ಗಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಕೂಡಲೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಜಮ್ಮು ಹಾಗೂ ಕಾಶ್ಮೀರ ಸೇರಿದಂತೆ ರಾಜ್ಯಗಳು ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯವಾದಿಯೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ನ್ಯಾಯವಾದಿ ವಿಶಾಲ್ ತಿವಾರಿ, ಜಮ್ಮು ಹಾಗೂ ಕಾಶ್ಮೀರದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಕೂಡ ಭದ್ರತೆ ಒದಗಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಪ್ರವಾಸಿಗರು ಭೇಟಿ ನೀಡುವ ಹಾಗೂ ಸೇರುವ ಸ್ಥಳಗಳಲ್ಲಿ ಮುಖ್ಯವಾಗಿ ದುರ್ಗಮ ಬೆಟ್ಟ ಹಾಗೂ ಕಣಿವೆ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಮಾಡಲು ನಿರ್ದೇಶನ ನೀಡುವಂತೆ ಕೂಡ ತಿವಾರಿ ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಈ ಉದ್ದೇಶಕ್ಕೆ ವಿಶೇಷ ಪಡೆಯನ್ನು ರೂಪಿಸಲು ನಿರ್ದೇಶಿಸುವಂತೆ ಕೂಡ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.