ವಕ್ಫ್ ಕಾಯ್ದೆ ಪ್ರಶ್ನಿಸಿದ ಹೊಸ ಅರ್ಜಿಗಳನ್ನು ಪುರಷ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಮತ್ತೆ 13 ಅರ್ಜಿಗಳನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ನಿರ್ವಹಿಸಲು ಕಷ್ಟಕರವಾಗುವುದರಿಂದ ಇನ್ನೂ ಹೆಚ್ಚಿನ ಅರ್ಜಿಗಳನ್ನು ಸೇರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘‘ನಾವು ಈಗ ಅರ್ಜಿಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ. ಅದು ರಾಶಿಯಾಗುತ್ತಲೇ ಹೋಗುತ್ತದೆ ಮತ್ತು ಅದನ್ನು ನಿರ್ವಹಿಸಲು ಕಷ್ಟಕರವಾಗುತ್ತದೆ’’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಸಿಂಗ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಇತರ ಅರ್ಜಿದಾರರೊಂದಿಗೆ ತಮ್ಮನ್ನು ಕೂಡ ಆಲಿಸಬೇಕು ಎಂದು ಹಲವು ಅರ್ಜಿದಾರರ ಪರ ವಕೀಲರ ತಂಡ ಆಗ್ರಹಿಸಿದ ಸಂದರ್ಭ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದರೆ, ಪೀಠ ವಕ್ಫ್ ಕಾಯ್ದೆಯನ್ನು ಪ್ರಶ್ನಿಸಲು ನಿಮ್ಮಲ್ಲಿ ಹೆಚ್ಚುವರಿ ಕಾರಣಗಳಿದ್ದರೆ ಈಗಾಗಲೇ ಸಲ್ಲಿಸಿರುವ ಮುಖ್ಯ ಅರ್ಜಿಗಳಲ್ಲಿ ಮಧ್ಯ ಪ್ರವೇಶಿಸಬಹುದು ಎಂದು ಫಿರೋಜ್ ಇಕ್ಬಾಲ್ ಖಾನ್, ಇಮ್ರಾನ್ ಪ್ರತಾಪ್‌ಗಢಿ, ಶೇಖ್ ಮುನೀರ್ ಅಹ್ಮದ್ ಹಾಗೂ ಮುಸ್ಲಿಂ ಅಡ್ವೊಕೇಟ್ ಅಸೋಸಿಯೇಶನ್ ಸೇರಿದಂತೆ ದೂರುದಾರರಿಗೆ ತಿಳಿಸಿತು.