ಗರಿಷ್ಠ ಶಿಕ್ಷೆಯ 1/3 ಶಿಕ್ಷಾವಧಿ ಮುಗಿದರೆ ಜೈಲಿನಿಂದ ಬಿಡುಗಡೆ: ವಿಚಾರಣಾಧೀನ ಕೈದಿಗಳಿಗೆ ಸುಪ್ರೀಂ ಅಭಯ
ಹೊಸದಿಲ್ಲಿ: ಮೊದಲ ಬಾರಿಗೆ ಅಪರಾಧ ಎಸಗಿ, ವಿಚಾರಣೆ ಎದುರಿಸುತ್ತಿರುವ ಕೈದಿಗಳು ಆ ಅಪರಾಧದ ಗರಿಷ್ಠ ಶಿಕ್ಷಾವಧಿಯ ಮೂರನೇ ಒಂದರಷ್ಟು ಭಾಗವನ್ನು ಜೈಲಿನಲ್ಲಿ ಕಳೆದಿದ್ದರೆ ಅಂತಹ ಕೈದಿಗಳನ್ನು ಕಡ್ಡಾಯವಾಗಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 479ನ್ನು ಪೂರ್ವಾನ್ವಯವಾಗಿ ಕಡ್ಡಾಯ ಜಾರಿಯಾಗುವಂತೆ ಸೂಚಿಸಿದೆ.
ಭಾರತೀಯ ನ್ಯಾಯಸಂಹಿತೆ ಮತ್ತು ಭಾರತೀಯ ಶಿಕ್ಷಾ ಸಂಹಿತೆಯ ಜತೆಗೆ ಬಿಎನ್ಎಸ್ಎಸ್ ಈ ವರ್ಷ ಜಾರಿಗೆ ಬಂದಿದ್ದರೂ, ಎಎಸ್ ಜಿ ಐಶ್ವರ್ಯ ಭಾಟಿ ಅವರ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಸಂಭಾವ್ಯ ಫಲಾನುಭವಿ ವಿಚಾರಣಾಧೀನ ಕೈದಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ಯಾವುದೇ ದಿನಾಂಕದಂದು ಕೈದಿ ಬಂಧನಕ್ಕೆ ಒಳಗಾಗಿದ್ದರೂ, ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಿದೆ.
ಪ್ರಥಮ ಬಾರಿಗೆ ಅಪರಾಧ ಎಸಗಿ ವಿಚಾರಣೆ ಎದುರಿಸುತ್ತಿರುವ ಕೈದಿಗಳು ಗರಿಷ್ಠ ಶಿಕ್ಷಾವಧಿಯ ಮೂರನೇ ಒಂದರಷ್ಟು ಅವಧಿಯನ್ನು ಪೂರ್ಣಗೊಳಿಸಿದ್ದರೆ, ಅವರ ಬಿಡುಗಡೆಗೆ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಪೀಠ ಜೈಲು ಅಧೀಕ್ಷಕರಿಗೆ ಸೂಚಿಸಿದೆ. ಇಂಥ ಕೈದಿಗಳ ಬಿಡುಗಡೆಗೆ ಅರ್ಜಿ ಸಲ್ಲಿಸುವ ಮೂಲಕ ಅವರು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ಎಲ್ಲ ರಾಜ್ಯ ಸರ್ಕಾರಗಳ ಸಂಬಂಧಪಟ್ಟ ಇಲಾಖೆಗಳು 2 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಈ ಮಾನದಂಡದಡಿ ಅರ್ಹತೆ ಪಡೆಯುವ ವಿಚಾರಣಾಧೀನ ಕೈದಿಗಳು ಈ ದೀಪಾವಳಿಯನ್ನು ಕುಟುಂಬದ ಜತೆ ಆಚರಿಸುವಂತಾಗಲಿ ಎಂದು ನ್ಯಾಯಮೂರ್ತಿ ಕೊಹ್ಲಿ ಆಶಿಸಿದ್ದಾರೆ.