ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸುಪ್ರೀಂ ಕೋರ್ಟ್; ನ್ಯಾಯಾಧೀಶರು, ವಕೀಲರಿಂದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಕೆ

Update: 2025-04-23 17:09 IST
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸುಪ್ರೀಂ ಕೋರ್ಟ್; ನ್ಯಾಯಾಧೀಶರು, ವಕೀಲರಿಂದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಕೆ

Photo credit: PTI

  • whatsapp icon

ಹೊಸದಿಲ್ಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿ ಬಗ್ಗೆ ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.

ಬುಧವಾರ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ವಕೀಲರು 2 ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಕೀಲರು ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ 300ಕ್ಕೂ ಅಧಿಕ ಸದಸ್ಯರು ಈ ವೇಳೆ ಭಾಗವಹಿಸಿದ್ದರು.

ʼಸರ್ವೋಚ್ಚ ನ್ಯಾಯಾಲಯವು ಭಯೋತ್ಪಾದಕ ಕೃತ್ಯವನ್ನು ಖಂಡಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆʼ ಎಂದು ಸುಪ್ರೀಂ ಕೋರ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಬುದ್ದಿಹೀನ ಹಿಂಸೆಯ ಈ ಪೈಶಾಚಿಕ ಕೃತ್ಯವು ಎಲ್ಲರ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಮತ್ತು ಕ್ರೂರತೆಯ ಕಟುವಾದ ಜ್ಞಾಪನೆಯಾಗಿದೆ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ಣಯದಲ್ಲಿ ʼಕ್ರೂರವಾಗಿ ಮತ್ತು ಅಕಾಲಿಕವಾಗಿ ಹತ್ಯೆಗೀಡಾದ ಅಮಾಯಕರಿಗೆ ಭಾರತದ ಸುಪ್ರೀಂ ಕೋರ್ಟ್ ಗೌರವಯುತ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ದುಃಖಿತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಈ ದುಃಖದ ಸಮಯದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ರಾಷ್ಟ್ರವು ನಿಂತಿದೆ. ಭಾರತದ ಮುಕುಟದ ರತ್ನವಾದ ಕಾಶ್ಮೀರದ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಿದ್ದ ಪ್ರವಾಸಿಗರ ಮೇಲಿನ ದಾಳಿ ನಿಸ್ಸಂದೇಹವಾಗಿ ಮಾನವೀಯತೆ ಮತ್ತು ಜೀವನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದು ಇದನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸುತ್ತದೆʼ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News