ಸುಪ್ರೀಂ ಕೋರ್ಟ್‌ ಗೆ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಅಧಿಕಾರವಿದೆ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾ. ಚೆಲಮೇಶ್ವರ

Update: 2025-04-21 17:05 IST
Chelameswar

ನ್ಯಾ. ಚೆಲಮೇಶ್ವರ | PC : X  

  • whatsapp icon

ಚೆನ್ನೈ: ಸಂಸತ್ತು ರೂಪಿಸುವ ಕಾನೂನಿನ ಕಾನೂನುಬದ್ಧತೆಯನ್ನು ಪರಿಶೀಲಿಸುವ ಅಧಿಕಾರದಂತೆಯೇ ಯಾವುದೇ ಕ್ರಮವನ್ನು ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನೂ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾ.ಜೆ.ಚೆಲಮೇಶ್ವರ ಅವರು ಹೇಳಿದ್ದಾರೆ. ತನ್ಮೂಲಕ ರಾಜ್ಯ ವಿಧಾನಸಭೆಗಳು ಅಂಗೀಕರಿಸಿರುವ ಮಸೂದೆಗಳಿಗೆ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಕಾಲಮಿತಿಯೊಳಗೆ ಒಪ್ಪಿಗೆ ನೀಡಬೇಕೆಂದು ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ಶನಿವಾರ ಇಲ್ಲಿ ‘ಸಂವಿಧಾನದ 75ನೇ ವರ್ಷ’ ಶೀರ್ಷಿಕೆಯ ರಾಕೇಶ ದತ್ತಿ ಉಪನ್ಯಾಸವನ್ನು ನೀಡಿದ ನ್ಯಾ.ಚೆಲಮೇಶ್ವರ, ಸಂಸತ್ತು ತಂದಿರುವ ಕಾನೂನನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಮತ್ತು ಅದನ್ನು ಅಸಾಂವಿಧಾನಿಕ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ಸಾಧ್ಯವಿರುವಾಗ ಉನ್ನತ ಸಾರ್ವಜನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಿಗೂ ನ್ಯಾಯಾಲಯಗಳು ನಿರ್ದೇಶನಗಳನ್ನು ನೀಡಬಹುದು ಎಂದು ಹೇಳಿದರು.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೇರಿದಂತೆ ಕೆಲವು ವ್ಯಕ್ತಿಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಿರುವ ಸರ್ವೋಚ್ಚ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಿದ್ದು,ಈ ಸಂಬಂಧ ಮದ್ರಾಸ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಸಿ.ಟಿ.ಸೆಲ್ವಂ ಅವರ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ನ್ಯಾ.ಚೆಲಮೇಶ್ವರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಮಿಳುನಾಢು ವಿಧಾನಸಭೆಯು ಅಂಗೀಕರಿಸಿದ್ದ ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಬೆಂಬಲಿಸಿದ್ದ ಮತ್ತು ವಿರೋಧಿಸಿದ್ದ ಹೇಳಿಕೆಗಳನ್ನು ಉಲ್ಲೇಖಿಸಿದ ನ್ಯಾ.ಚೆಲಮೇಶ್ವರ,ಸರ್ವೋಚ್ಚ ನ್ಯಾಯಾಲಯವು ಮಸೂದೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಸೂಕ್ತ ಸಲಹೆ ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದ್ದರೆ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.

ಭಾರತೀಯ ಸಂವಿಧಾನದಂತೆ ರಾಷ್ಟ್ರಪತಿಗಳು ಕೇಂದ್ರ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಮೂರು ತಿಂಗಳೊಳಗೆ ರಾಷ್ಟ್ರಪತಿಗಳಿಗೆ ಸೂಕ್ತ ಸಲಹೆಯನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶಿಸಿದ್ದರೆ ಯಾವುದೇ ಆಕ್ಷೇಪವಿರುತ್ತಿರಲಿಲ್ಲ. ಕೇಂದ್ರ ಸರಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಕಾರ್ಯ ನಿರ್ವಹಿಸುತ್ತಾರೆ,ಹೀಗಾಗಿ ಕೇಂದ್ರ ಸರಕಾರವು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಬೇಕಿತ್ತು. ಅಷ್ಟು ಸಾಕಾಗುತ್ತಿತ್ತು ಎಂದು ಹೇಳಿದರು.

ಧನ್ಕರ್ ಅವರ ವಾಗ್ದಾಳಿಯ ಕುರಿತು ನ್ಯಾ.ಚೆಲಮೇಶ್ವರ,ರಾಷ್ಟ್ರಪತಿಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನವನ್ನು ನೀಡಬಹುದು ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News