ಸಾಮಾಜಿಕ, ಜಾತಿ ಆಧಾರಿತ ಜನಗಣತಿ ಕೋರಿ ಸಲ್ಲಿಸಿರುವ ಪಿಐಎಲ್ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

Update: 2024-09-02 10:41 GMT

 ಸುಪ್ರೀಂ ಕೋರ್ಟ್ | PC: PTI

ಹೊಸದಿಲ್ಲಿ: ಸಾಮಾಜಿಕ ಮತ್ತು ಜಾತಿ ಆಧಾರಿತ ಜನಗಣತಿ ನಡೆಸುವಂತೆ ಕೋರಿ ಅರ್ಜಿದಾರರೋರ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಅನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

94 ದೇಶಗಳು ಇದನ್ನು ಮಾಡಿದೆ, ಭಾರತ ಇದನ್ನು ಮಾಡಬೇಕಾಗಿದೆ. ಇದನ್ನು ನಿಯಮಿತವಾಗಿ ಮಾಡಬೇಕೆಂದು ಇಂದ್ರ ಸಾಹ್ನಿ ತೀರ್ಪು ಹೇಳುತ್ತದೆ ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಇಲ್ಲ ಕ್ಷಮಿಸಿ, ನಾವು ಈ ಕುರಿತ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ. ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ನ್ಯಾಯಮೂರ್ತಿ ರಾಯ್ ಅರ್ಜಿದಾರರ ಪರ ವಕೀಲರಿಗೆ ಹೇಳಿದ್ದಾರೆ. ನ್ಯಾಯಾಲಯದ ಅಭಿಪ್ರಾಯವನ್ನು ಪರಿಗಣಿಸಿ ಅರ್ಜಿದಾರರು ಅಂತಿಮವಾಗಿ ಅರ್ಜಿಯನ್ನು ಹಿಂತೆಗೆದುಕೊಂಡಿದ್ದಾರೆ.

1992ರ ಇಂದ್ರ ಸಾಹ್ನಿ ತೀರ್ಪು ಹಿಂದುಳಿದ ಜಾತಿಗಳಿಗೆ ಮೀಸಲಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದ್ದು, ಮೀಸಲಾತಿಗೆ 50 ಪ್ರತಿಶತ ಮಿತಿಯನ್ನು ವಿಧಿಸಿದ್ದಾರೆ. 2021ರ ಮರಾಠ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಮತ್ತೆ ಉಲ್ಲೇಖಿಸಿತ್ತು.

ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ನಡೆಸುವುದು ಕೆಲವು ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ಒಳಗಾಗಿದೆ. ಜಾತಿ ಗಣತಿ ನಡೆಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಕೂಡ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದೆ. 2023ರ ಆಗಸ್ಟ್ ನಲ್ಲಿ ಪಾಟ್ನಾ ಹೈಕೋರ್ಟ್ ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸುವ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News