ಇವಿಎಂ-ವಿವಿಪ್ಯಾಟ್ ಪ್ರಕರಣ: ವ್ಯವಸ್ಥೆ ಬಲಪಡಿಸಲು ಏನು ಮಾಡಬಹುದೆಂದು ನೋಡೋಣ ಎಂದು ಹೇಳಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಚುನಾವಣೆಗಳಿಗೆ ತಾನು ನಿಯಂತ್ರಣಾ ಪ್ರಾಧಿಕಾರವಲ್ಲ ಹಾಗೂ ಸಂವಿಧಾನಿಕ ಪ್ರಾಧಿಕಾರವಾದ ಚುನಾವಣಾ ಆಯೋಗಕ್ಕೆ ಅದರ ಕಾರ್ಯನಿರ್ವಹಣೆ ಕುರಿತು ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಇವಿಎಂಗಳಲ್ಲಿ ಬಿದ್ದ ಮತಗಳ ಜೊತೆಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನೂ ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಕೇವಲ ಶಂಕೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರ ಪೀಠ ಹೇಳಿದೆ.
ಇಂದು ಮುಂಜಾನೆಯ ವಿಚಾರಣೆ ವೇಳೆ ಇವಿಎಂಗಳ ಕಾರ್ಯನಿರ್ವಹಣೆ ಕುರಿತಂತೆ ಚುನಾವಣಾ ಆಯೋಗಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದ ಸುಪ್ರೀಂ ಕೋರ್ಟ್, 2 ಗಂಟೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ತಿಳಿಸಿತ್ತು.
“ಉತ್ತರಗಳು ಸಿಕ್ಕಿವೆ, ತೀರ್ಪು ಕಾಯ್ದಿರಿಸಲಾಗಿದೆ, ಏನು ಮಾಡಬಹುದೆಂದು ನೋಡೋಣ. ಈಗಿನ ವ್ಯವಸ್ಥೆಯನ್ನು ಬಲಪಡಿಸಲು ಏನು ಮಾಡಬಹುದೆಂದು ನೋಡೋಣ,” ಎಂದು ನ್ಯಾಯಪೀಠ ಹೇಳಿದೆ.