ಭಾರತದ ಜಗತಿಕ ಸ್ಥಾನಮಾನದಲ್ಲಿ ಅಗಾಧ ಏರಿಕೆಯಾಗಿದೆ ಎಂಬ ಮೋದಿ ಹೇಳಿಕೆ ‘‘ಭ್ರಮೆ’’ ಎಂದ ಸಮೀಕ್ಷೆ

Update: 2024-05-08 16:47 GMT

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಭಾರತದ ಅಂತರ್‌ರಾಷ್ಟ್ರೀಯ ಪ್ರತಿಷ್ಠೆ ಗಮನಾರ್ಹವಾಗಿ ಸುಧಾರಿಸಿದೆ ಎಂಬುದಾಗಿ ಅವರ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೇಳಿಕೊಳ್ಳುತ್ತಿದೆ. ಆದರೆ, 2014ರಲ್ಲಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಭಾರತದ ಬಗ್ಗೆ ಜಾಗತಿಕ ವೀಕ್ಷಕರು ಹೊಂದಿದ್ದ ಗೌರವ ಈಗ ತುಂಬಾ ಕಡಿಮೆಯಾಗಿದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

ಸಮೀಕ್ಷಾ ಮತ್ತು ಸಲಹಾ ಸಂಸ್ಥೆ ‘ಗ್ಲೋಬ್‌ಸ್ಕ್ಯಾನ್’ ಮಾರ್ಚ್ 29ರಿಂದ ಎಪ್ರಿಲ್ 8ರವರೆಗೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ಸಮೀಕ್ಷೆಯೊಂದನ್ನು ನಡೆಸಿತು. ತಮ್ಮ ದೇಶಗಳು ಭಾರತದೊಂದಿಗಿನ ಸಂಬಂಧವನ್ನು ಬಲಗೊಳಿಸಬೇಕಾದರೆ ಅದು ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಗತ್ಯವಾಗಿದೆ ಎಂಬುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ 89 ಶೇಕಡ ಮಂದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ನಮ್ಮ ದೇಶವು ಭಾರತದಲ್ಲಿ ಕೈಗಾರಿಕಾ ಮತ್ತು ಇತರ ವಾಣಿಜ್ಯ ಹೂಡಿಕೆಗಳನ್ನು ಮಾಡಲು ಮಾನವಹಕ್ಕುಗಳ ರಕ್ಷಣೆ ಅಗತ್ಯ ಪೂರ್ವ ಶರತ್ತು ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ಮತ್ತು ಕೆನಡದ ನಾಗರಿಕರನ್ನು ಅವರ ನೆಲದಲ್ಲಿಯೇ ಕೊಲ್ಲಲು ಭಾರತ ಸರಕಾರ ನಡೆಸುತ್ತಿದೆಯೆನ್ನಲಾದ ಪ್ರಯತ್ನಗಳ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ 90 ಶೇಕಡ ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ, ಮುಸ್ಲಿಮರು ಭಾರತದ ಪೌರತ್ವ ಪಡೆಯುವುದನ್ನು ಕಠಿಣವಾಗಿಸುವ ನೂತನ ಕಾನೂನುಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಪಾಲ್ಗೊಂಡ ನಾಲ್ವರ ಪೈಕಿ ಮೂವರು ಆತಂಕ ವ್ಯಕ್ತಪಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ ನೆದರ್‌ಲ್ಯಾಂಡ್ಸ್‌ನ ಗ್ರೋನಿಂಜನ್ ವಿಶ್ವವಿದ್ಯಾನಿಲಯ, ಲಂಡನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಓರಿಯಂಟಲ್ ಆ್ಯಂಡ್ ಆಫ್ರಿಕನ್ ಸ್ಟಡೀಸ್ ಮತ್ತು ಫ್ರೆಂಡ್ಸ್ ಆಫ್ ಡೆಮಾಕ್ರಸಿ ಸಂಘಟನೆಯು ಜಂಟಿ ಸಮೀಕ್ಷೆಯನ್ನು ನಡೆಸಿವೆ.

ಆದಾಗ್ಯೂ, ಬ್ರಿಟನ್‌ನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ 10 ಶೇಕಡ ಮಂದಿ ಮತ್ತು ಅಮೆರಿಕದಲ್ಲಿ 22 ಶೇಕಡ ಮಂದಿ ಮೋದಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅಮೆರಿಕದಲ್ಲಿ, ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕರ ಪೈಕಿ 9 ಶೇಕಡ ಮಂದಿ ಮಾತ್ರ ಮೋದಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಯುಗವ್’ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಮೋದಿ ಹೆಚ್ಚಿನ ಜನರಿಗೆ ಗೊತ್ತೂ ಇಲ್ಲ ಮತ್ತು ಜನಪ್ರಿಯರೂ ಅಲ್ಲ. ಈ ಅಂಶವನ್ನೂ ‘ಗ್ಲೋಬ್‌ಸ್ಕ್ಯಾನ್’ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅತ್ಯಂತ ಅನಪೇಕ್ಷಿತ ವ್ಯಕ್ತಿಗಳು. ಆದರೆ, ಜನಪ್ರಿಯತೆಯ ಪಟ್ಟಿಯಲ್ಲಿ ಮೋದಿ ಅವರಿಗಿಂತಲೂ ಕೆಳಗಿನ ಸ್ಥಾನವನ್ನು ಪಡೆದಿದ್ದಾರೆ.

‘ಪ್ಲಾಟ್‌ಫಾರ್ಮ್ ಫಾರ್ ಇಂಡಿಯನ್ ಡೆಮಾಕ್ರಸಿ’ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಬ್ರಿಟಿಶ್ ಭಾರತೀಯ ಪೈಕಿ 52 ಶೇಕಡ ಮಂದಿ ಮೋದಿಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿಲ್ಲ ಮತ್ತು 35 ಶೇಕಡ ಮಂದಿ ಅವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News