ಇಸ್ರೋದಿಂದ ‘ಸೂರ್ಯಶಿಕಾರಿ’ಗೆ ಸೆ.2ರಂದು ಮುಹೂರ್ತ ಸಾಧ್ಯತೆ

Update: 2023-08-26 15:43 GMT

Aditya-L1 | Photo: Twitter \ @isro

ಬೆಂಗಳೂರು: ಚಂದ್ರಯಾನ-3ರ ಯಶಸ್ಸಿನ ಸಂಭ್ರಮದಲ್ಲಿರುವ ಇಸ್ರೋ ದೇಶದ ಜನತೆಗೆ ಇನ್ನೊಂದು ಖುಷಿಯ ಸುದ್ದಿಯನ್ನು ನೀಡಿದೆ. ಅದೀಗ ‘ಸೂರ್ಯ ಶಿಕಾರಿ’ಗೆ ಮುಂದಾಗಿದೆ. ಇನ್ನೊಂದು ವಾರದೊಳಗೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಸೌರ ಅಭಿಯಾನಕ್ಕೆ ಅದು ಚಾಲನೆ ನೀಡಲಿದೆ. ಇದಕ್ಕೆ ಸೆ.2ರ ಮುಹೂರ್ತ ನಿಗದಿಯಾಗುವ ಸಾಧ್ಯತೆಯಿದೆ.

ಸೂರ್ಯನ ಕರೋನಾ ಅಥವಾ ಪ್ರಭಾವಲಯದ ದೂರದ ಅವಲೋಕನಗಳನ್ನು ಮತ್ತು ಭೂಮಿಯಿಂದ ಸುಮಾರು 15 ಲ.ಕಿ.ಮೀ.ದೂರದಲ್ಲಿರುವ ಎಲ್1 (ಸೂರ್ಯ-ಭೂಮಿ ಲಗ್ರಾಂಜಿಯನ್ ಪಾಯಿಂಟ್)ನಲ್ಲಿಯ ಸೌರ ಮಾರುತದ ಮೂಲಸ್ಥಾನ ಅವಲೋಕನಗಳನ್ನು ಒದಗಿಸುವಂತೆ ಆದಿತ್ಯ-ಎಲ್1 ಗಗನನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಎರಡು ಬೃಹತ್ ಕಾಯಗಳ ಒಟ್ಟು ಗುರುತ್ವಾಕರ್ಷಣ ಬಲಗಳು ತುಲನಾತ್ಮಕವಾಗಿ ಸಣ್ಣದಾಗಿರುವ ಮೂರನೇ ಕಾಯವು ಅನುಭವಿಸುವ ಕೇಂದ್ರಾಪಗಾಮಿ ಬಲಕ್ಕೆ ಸಮನಾಗಿರುವ ಬಾಹ್ಯಾಕಾಶದಲ್ಲಿಯ ಸ್ಥಾನ ಅಥವಾ ಸ್ಥಳವನ್ನು ಲಗ್ರಾಂಜಿಯನ್ ಪಾಯಿಂಟ್ ಎಂದು ಕರೆಯಲಾಗುತ್ತದೆ.

ಇಸ್ರೋ ಉಡಾವಣೆಗೊಳಿಸಲಿರುವ ಸೂರ್ಯಯಾನವು ಸೂರ್ಯನ ಅಧ್ಯಯನಕ್ಕಾಗಿ ಮೀಸಲಾದ ಮೊದಲ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಲಿದೆ.

ಎಲ್1 ಸುತ್ತಲಿನ ಕಕ್ಷೆಯಿಂದ ಸೂರ್ಯನ ಅಧ್ಯಯನದ ಗುರಿಯನ್ನು ಹೊಂದಿರುವ ಆದಿತ್ಯ-ಎಲ್1 ಅಭಿಯಾನವು ವಿವಿಧ ವೇವ್ ಬ್ಯಾಂಡ್ಗಳಲ್ಲಿ ದ್ಯುತಿಗೋಳ, ವರ್ಣಗೋಳ,ಮತ್ತು ಸೂರ್ಯನ ಅತ್ಯಂತ ಹೊರಗಿನ ಪದರವಾಗಿರುವ ಕರೋನಾದ ಅವಲೋಕನಕ್ಕಾಗಿ ಏಳು ಪೇಲೋಡ್ಗಳನ್ನು ಹೊತ್ತೊಯ್ಯಲಿದೆ.

ಆದಿತ್ಯ-ಎಲ್1 ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಂಪೂರ್ಣ ಸ್ವದೇಶಿ ಪ್ರಯತ್ನವಾಗಿದೆ ಎಂದು ಇಸ್ರೋ ಅಧಿಕಾರಿಯೋರ್ವರು ತಿಳಿಸಿದರು.

ಇಲ್ಲಿಯ ಯು.ಆರ್.ರಾವ್ ಸ್ಯಾಟೆಲೈಟ್ ಸೆಂಟರ್ನಲ್ಲಿ ಮೈದಳೆದಿರುವ ಉಪಗ್ರಹವು ಎರಡು ವಾರಗಳ ಹಿಂದೆಯೇ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿಯ ಇಸ್ರೋದ ಉಡಾವಣಾ ಕೇಂದ್ರವನ್ನು ತಲುಪಿದೆ. ಸೆ.2ರಂದು ಉಡಾವಣೆ ನಡೆಯಬಹುದು ಎಂದರು.

ಸೂರ್ಯ-ಭೂ ವ್ಯವಸ್ಥೆಯ ಎಲ್1 ಪಾಯಿಂಟ್ ಸುತ್ತಲಿನ ಪ್ರಭಾವಳಿ ಕಕ್ಷೆಯಲ್ಲಿ ಗಗನನೌಕೆಯನ್ನಿರಿಸಲು ಯೋಜಿಸಲಾಗಿದೆ. ಇಸ್ರೋದ ಪ್ರಕಾರ ಈ ಕಕ್ಷೆಯಲ್ಲಿರಿಸಲಾಗುವ ಉಪಗ್ರಹವು ಯಾವುದೇ ಮರೆಮಾಚುವಿಕೆ/ಗ್ರಹಣಗಳಿಲ್ಲದೆ ಸೂರ್ಯನನ್ನು ವೀಕ್ಷಿಸುವ ಪ್ರಮುಖ ಅನುಕೂಲವನ್ನು ಹೊಂದಿರುತ್ತದೆ.

ಇದು ನೈಜ ಸಮಯದಲ್ಲಿ ಸೌರ ಚಟುವಟಿಕೆಗಳನ್ನು ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮಗಳನ್ನು ಅವಲೋಕಿಸಲು ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂದು ಇಸ್ರೋ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News