ತಹಾವುರ್ ರಾಣಾ ಎನ್‌ಐಎ ವಶಕ್ಕೆ ; ಅಮೆರಿಕದಿಂದ ಗಡಿಪಾರು ಗೊಂಡ 26/11 ದಾಳಿಯ ಸೂತ್ರಧಾರಿ

ತಹಾವುರ್ ರಾಣಾ | PC : X \ @PriyankaJRathod
ಹೊಸದಿಲ್ಲಿ:ಅಮೆರಿಕದಿಂದ ಗಡಿಪಾರುಗೊಂಡಿರುವ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹಾವುರ್ ರಾಣಾನನ್ನು ಗುರುವಾರ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ಕರೆತರಲಾಗಿದ್ದು, ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ.
64 ವರ್ಷ ವಯಸ್ಸಿನ ರಾಣಾನನ್ನು ಭಯೋತ್ಪಾದನಾ ವಿರೋಧಿ ಕಾನೂನಿನಡಿ ರಾಣಾನನ್ನು ಬಂಧಿಸಲಾಗಿದೆ. ಪ್ರಸಕ್ತ ಆತನನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಅತ್ಯಂತ ಬಿಗಿಭದ್ರತೆಯೊಂದಿಗೆ ಇರಿಸಲಾಗಿದೆ.
ರಾಣಾ ವಿರುದ್ಧ ಕ್ರಿಮಿನಲ್ ಸಂಚು, ಭಾರತ ಸರಕಾರದ ವಿರುದ್ಧ ಸಮರ ಸಾರುವಿಕೆ, ಹತ್ಯೆ, ಫೋರ್ಜರಿ ಪ್ರಕರಣಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ.
ತನ್ನನ್ನು ಭಾರತಕ್ಕೆ ಗಡಿಪಾರುಗೊಳಿಸುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ರಾಣಾನ ಮನವಿಯನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಎನ್‌ಐಎ ಹಾಗೂ ದೇಶದ ಬೇಹುಗಾರಿಕಾ ಸಂಸ್ಥೆ ‘ರಾ’ದ ಅಧಿಕಾರಿಗಳ ಜಂಟಿ ತಂಡವೊಂದು ರಾಣಾನನ್ನು ಕರೆತರಲು ಅಮೆರಿಕಕ್ಕೆ ತೆರಳಿತ್ತು.
ರಾಣಾನನ್ನು ಭಾರತಕ್ಕೆ ಕರೆತರುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮಾತುಕತೆ ನಡೆಸಿದರು. ಅಮೆರಿಕದಿಂದ ರಾಣಾನ ಗಡಿಪಾರು, ಪ್ರಧಾನಿ ನರೇಂದ್ರಮೋದಿಯವರ ರಾಜತಾಂತ್ರಿಕತೆಗೆ ಸಂದ ಅತಿ ದೊಡ್ಡ ಗೆಲುವೆಂದು ಅಮಿತ್ ಶಾ ಅವರು ಬಣ್ಣಿಸಿದ್ದಾರೆ.
►ಮೋದಿ-ಟ್ರಂಪ್ ಮಾತುಕತೆ ಬಳಿಕ ಚುರುಕುಗೊಂಡ ಗಡಿಪಾರು ಪ್ರಕ್ರಿಯೆ
ಪ್ರಧಾನಿ ನರೇಂದ್ರ ಮೋದಿ ಅವರು ಫೆ.10ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಸಂದರ್ಭ ರಾಣಾನ ಹಸ್ತಾಂತರಕ್ಕೆ ಆಗ್ರಹಿಸಿದ್ದರು. ಮೋದಿ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯ ಸಂದರ್ಭ ಟ್ರಂಪ್ ಅವರು, ‘‘ಅತಿ ದುಷ್ಟ ರಾಣಾನ ಗಡಿಪಾರಿಗೆ ತನ್ನ ಸರಕಾರ ಸಮ್ಮತಿಸಿದೆ. ವಿಚಾರಣೆಯನ್ನು ಎದುರಿಸಲು ಭಾರತಕ್ಕೆ ಹಿಂತಿರುಗಲಿದ್ದಾನೆ’’ ಎಂದು ಘೋಷಿಸಿದ್ದರು.
ಇದಾದ ಎರಡು ತಿಂಗಳುಗಳ ಬಳಿಕ ರಾಣಾ ಅಮೆರಿಕದಿಂದ ಗಡಿಪಾರುಗೊಂಡಿದ್ದಾನೆ. 166 ಮಂದಿಗೂ ಅಧಿಕ ಮಂದಿ ಬಲಿಯಾಗಿದ್ದ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಹಾವುರ್ ರಾಣಾ ಪ್ರಮುಖ ಪಾತ್ರವಹಿಸಿದ್ದನೆಂಬ ಆರೋಪವನ್ನು ಎದುರಿಸುತ್ತಿದ್ದಾನೆ.
ಪಾಕ್ ಮೂಲದ ಕೆನಡ ಪ್ರಜೆಯಾದ ರಾಣಾ ಮುಂಬೈ ಭಯೋತ್ಪಾದಕ ದಾಳಿಗಾಗಿ ಸಾಗಣೆ ಹಾಗೂ ಆರ್ಥಿಕ ಬೆಂಬಲವನ್ನು ಒದಗಿಸಿದ್ದನೆಂದು ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಪಾಕ್ ಮೂಲದ ಅಮೆರಿಕನ್ ಉಗ್ರ ಡೇವಿಡ್ ಕೋಲ್ ಮ್ಯಾನ್ ಹ್ಯಾಡ್ಲಿ ಆಪಾದಿಸಿದ್ದನು.
ಡೆನ್ಮಾರ್ಕ್ ರಾಜಧಾನಿ ಕೋಪನ್‌ಹೇಗನ್ ನಲ್ಲಿ ದಿನಪತ್ರಿಕೆಯೊಂದರ ಕಾರ್ಯಾಲಯದ ಮೇಲೆ ವಿಫಲ ದಾಳಿ ಯತ್ನಕ್ಕೆ ನೆರವಾದ ಹಾಗೂ ಮುಂಬೈ ದಾಳಿಯಲ್ಲಿ ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಬಾಕ್ಕೆ ಸಹಕರಿಸಿದ ಆರೋಪಕ್ಕೆ ಸಂಬಂಧಿಸಿ 2009ರ ಆಕ್ಟೋಬರ್ ನಲ್ಲಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ, ತಹಾವುರ್ ರಾಣಾನನ್ನು ಚಿಕಾಗೋ ನಗರದಲ್ಲಿ ಬಂಧಿಸಿತ್ತು. ಎರಡು ವರ್ಷಗಳ ಆನಂತರ ಆತನನ್ನು ಅಮೆರಿಕದ ನ್ಯಾಯಾಲಯ ದೋಷಿಯೆಂದು ಪರಿಗಣಿಸಿ ಜೈಲಿನಲ್ಲಿರಿಸಿತ್ತು.
ಭಾರತಕ್ಕೆ ತನ್ನ ಗಡಿಪಾರನ್ನು ರಾಣಾ ಅಮೆರಿಕದ ವಿವಿಧ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದನು. ಉದರಕ್ಕೆ ಸಂಬಂಧಿಸಿದ ಕಾಯಿಲೆ, ಪಾರ್ಕಿನ್ಸನ್ ರೋಗ ಸೇರಿದಂತೆ ವಿವಿಧ ವ್ಯಾಧಿಗಳಿಂದ ಬಳಲುತ್ತಿರುವುದರಿಂದ ಗಡಿಪಾರು ಮಾಡದಂತೆ ಕೋರಿದ್ದನು. ಆದರೆ ರಾಣಾನ ಅರ್ಜಿಯನ್ನು ನ್ಯಾಯಾಲಯಗಳು ತಿರಸ್ಕರಿಸಿರುವುದು, ಆತನ ಗಡಿಪಾರಿಗೆ ಹಾದಿಯನ್ನು ಸುಗಮಗೊಳಿಸಿದೆ.
ರಾಣಾ, ಡೇವಿಡ್ ಕೋಲ್ಮನ್ ಹ್ಯಾಡ್ಲಿ ಹಾಗೂ ಇತರ ಆರು ಮಂದಿ ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚುಹೂಡಿದ ಹಾಗೂ ಅವುಗಳನ್ನು ಕಾರ್ಯಗತಗೊಳಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ರಾಷ್ಟ್ರೀಯ ತನಿಖಾ ಸಂಸ್ಥೆಯು 2011ರ ಡಿಸೆಂಬರ್ ನಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.
ಪ್ರಸಕ್ತ ರಾಣಾನನ್ನು ಬಿಗಿಭದ್ರತೆಯೊಂದಿಗೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಒಂದು ವೇಳೆ ವಿಚಾರಣೆಗಾಗಿ ಆತನನ್ನು ಮುಂಬೈಗೆ ಕರತರುವುದಾದದಲ್ಲಿ ಆತನಿಗಾಗಿ ಆರ್ಥರ್ ರೋಡ್‌ನಲ್ಲಿರುವ ಕೇಂದ್ರೀಯ ಕಾರಾಗೃಹದ ಬ್ಯಾರಾಕ್ ಸಂಖ್ಯೆ 12ರಲ್ಲಿ ಇರಿಸಲು ಏರ್ಪಾಡುಗಳನ್ನು ಮಾಡಲಾಗಿದೆ.
►ರಾಣಾ ವಿಷಯದಲ್ಲಿ ತನಗೆ ಯಾವುದೇ ಸಂಬಂಧವಿಲ್ಲ: ಪಾಕ್ ಸ್ಪಷ್ಟನೆ
ಅಮೆರಿಕದಿಂದ ಭಾರತಕ್ಕೆ ಗಡಿಪಾರುಗೊಂಡಿರುವ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹಾವುರ್ ಹುಸೈನ್ ರಾಣಾ ವಿಷಯದಲ್ಲಿ ತನಗೆ ಯಾವುದೇ ಸಂಬಂಧವಿಲ್ಲವೆಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ರಾಣಾ ಕೆನಡಾ ಪ್ರಜೆಯಾಗಿದ್ದು, ಆತ ಕಳೆದ ಎರಡು ದಶಕಗಳಿಂದ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲವೆಂದು ಅದು ಹೇಳಿದೆ.
►ಚಾರ್ಜ್ ಶೀಟ್ ಸಲ್ಲಿಸಿದ 15 ವರ್ಷಗಳ ಬಳಿಕ ಎನ್‌ಐಎನಿಂದ ಬಂಧಿತನಾದ ರಾಣಾ
2008ರ ನವೆಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಹಾವುರ್ ರಾಣಾನನ್ನು ಲಷ್ಕರ್ ತಯ್ಯಬಾ ಗುಂಪಿನ ಉಗ್ರ ಡೇವಿಡ್ ಹೆಡ್ಲಿ ಕೋಲ್ಮಾನ್ ನ ಸಹಚರನೆಂದು ಆಪಾದಿಸಿತ್ತು. ಲಷ್ಕರೆ ತಯ್ಯಬಾದ ವರಿಷ್ಠ ಹಾಫೀಝ್ ಸಯೀದ್ ನ ಸೂಚನೆಯಂತೆ ಇವರಿಬ್ಬರೂ ಮುಂಬೈ ಭಯೋತ್ಪಾದಕ ದಾಳಿಗೆ ಸಂಚು ಹಾಗೂ ಸ್ಥಳ ಪರಿಶೀಲನೆ ನಡೆಸಿದ್ದರೆಂದು ಎನ್‌ಐಎ ಆಪಾದಿಸಿತ್ತು. ಹೆಡ್ಲಿಗೆ ವೀಸಾ ದೊರಕಿಸುವಲ್ಲಿ ನೆರವಾದ ಹಾಗೂ ಆತ ಭಾರತದಲ್ಲಿ ಪ್ರಯಾಣಿಸಲು ಸುಳ್ಳು ಗುರುತುಪತ್ರಗಳನ್ನು ಸೃಷ್ಟಿಸಿದ ಆರೋಪವನ್ನು ಕೂಡಾ ಆತನ ಮೇಲೆ ಹೊರಿಸಲಾಗಿದೆ.
ರಾಣಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾದ 15 ವರ್ಷಗಳ ಬಳಿಕ ಆತನನ್ನು ಎನ್‌ಐಎ ವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ.