ಎಟಿಎಂನಲ್ಲಿ 100 ರೂ., 200 ರೂ. ಮುಖಬೆಲೆ ನೋಟುಗಳ ಲಭ್ಯತೆಗೆ ಕ್ರಮ ಕೈಗೊಳ್ಳಿ: ಬ್ಯಾಂಕ್‌ಗಳಿಗೆ RBI ಸೂಚನೆ

ಸಾಂದರ್ಭಿಕ ಚಿತ್ರ | PC : PTI
ಮುಂಬೈ: ಎಟಿಎಂಗಳಲ್ಲಿ 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ ಎಂದು ಎಲ್ಲ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚನೆ ನೀಡಿದೆ.
ಬ್ಯಾಂಕುಗಳು ಹಾಗೂ ಎಟಿಎಂಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳು ಈ ದಿಕ್ಕಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಸಾರ್ವಜನಿಕರಿಗೆ ಹೆಚ್ಚಾಗಿ ಬಳಕೆಯಾಗುವ ಮುಖಬೆಲೆಗಳ ನೋಟುಗಳ ಲಭ್ಯತೆಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಎಲ್ಲ ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಮ್ ನಿರ್ವಾಹಕರು ತಮ್ಮ ಎಟಿಎಮ್‌ಗಳಲ್ಲಿ ನಿಯಮಿತವಾಗಿ 100 ರೂ. ಮತ್ತು 200 ರೂ.ನೋಟುಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಸೋಮವಾರ ಬಿಡುಗಡೆಗೊಳಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಎಟಿಎಂಗಳಲ್ಲಿ ಅಳವಡಿಸಿರುವ ಕ್ಯಾಸೆಟ್‌ಗಳ (ಹಣ ಸಂಗ್ರಹಿಸಲು ಬಳಸುವ ಪೆಟ್ಟಿಗೆ) ಪೈಕಿ ಒಂದು ಕ್ಯಾಸೆಟ್‌ನಲ್ಲಿ 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳು ಇರುವಂತೆ ನೋಡಿಕೊಳ್ಳಬೇಕು. ಸೆಪ್ಟೆಂಬರ್ 30ರೊಳಗೆ ಹಾಲಿ ಕಾರ್ಯಾಚರಣೆಯಲ್ಲಿರುವ ಎಟಿಎಂಗಳ ಪೈಕಿ ಶೇ. 75ರಷ್ಟು ಎಟಿಎಂಗಳಲ್ಲಿ ಈ ನಿಯಮ ಪಾಲಿಸಬೇಕು. ಮಾರ್ಚ್ 31, 2026ರೊಳಗೆ ಶೇ. 91ರಷ್ಟು ಎಟಿಎಂಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ.
ಎಟಿಎಮ್‌ಗಳಿಂದ ಹಣವನ್ನು ಹಿಂದೆಗೆದುಕೊಳ್ಳುವಾಗ ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಹಕರು 500 ರೂ. ನೋಟುಗಳನ್ನು ಮಾತ್ರ ಸ್ವೀಕರಿಸುತ್ತಿದ್ದು,ಇದರಿಂದ ಸಣ್ಣಪುಟ್ಟ ವಹಿವಾಟುಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐನ ಈ ಆದೇಶ ಹೊರಬಿದ್ದಿದೆ.