ಕಮಲಾ ಹ್ಯಾರಿಸ್ ಹೋರಾಟಗಾರ್ತಿ, ಆಕೆ ಮತ್ತೆ ಪುಟಿದೇಳಲಿದ್ದಾರೆ : ತಮಿಳುನಾಡಿನ ತವರು ಗ್ರಾಮಸ್ಥರ ವಿಶ್ವಾಸ
ತಿರುವರೂರ್ (ತಮಿಳುನಾಡು): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆಲುವು ಸಾಧಿಸುವಂತೆ ತೋರದಿದ್ದರೂ, ಆಕೆ ಹೋರಾಟಗಾರ್ತಿಯಾಗಿರುವುದರಿಂದ, ಆಕೆ ಮತ್ತೆ ಪುಟಿದೇಳಲಿದ್ದಾರೆ ಎಂದು ಕಮಲಾ ಹ್ಯಾರಿಸ್ ಅವರ ತಾಯಿಯ ತವರಾದ ತುಳಸೇಂದ್ರಪುರಂನ ನಿವಾಸಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಳಸೇಂದ್ರಪುರಂನ ನಿವಾಸಿಗಳು ಬುಧವಾರ ಬೆಳಗ್ಗೆಯಿಂದ ಸ್ಥಳೀಯರು ಟಿವಿಗಳ ಮುಂದೆ ಕುಳಿತಿದ್ದರು. ಅವರೆಲ್ಲ ಚುನಾವಣಾ ಫಲಿತಾಂಶಗಳನ್ನು ವೀಕ್ಷಿಸುತ್ತಾ, ಅಂತರ್ಜಾಲದಲ್ಲಿ ಫಲಿತಾಂಶದ ಟ್ರೆಂಡ್ ಅನ್ನು ಪರಿಶೀಲಿಸುತ್ತಿದ್ದರು. ಇನ್ನೂ ಹಲವಾರು ನಿವಾಸಿಗಳು ಶ್ರೀ ಧರ್ಮ ಸಸ್ಥ ಪೆರುಮಾಳ್ ದೇವಾಲಯಕ್ಕೆ ಭೇಟಿ ನೀಡಿ, ಕಮಲಾ ಹ್ಯಾರಿಸ್ ಗೆಲುವಿಗಾಗಿ ಪ್ರಾರ್ಥಿಸಿದರು ಎಂದು ವರದಿಯಾಗಿದೆ.
ಆದರೆ, ದಿನವು ಮುಂದುವರಿದಂತೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲುಗೈ ಸಾಧಿಸಿರುವುದು ಖಚಿತವಾಗತೊಡಗಿತು.
ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ತಿರುವರೂರ್ ಜಿಲ್ಲಾ ಪ್ರತಿನಿಧಿ ಹಾಗೂ ತುಳಸೇಂದ್ರಪುರಂ ಗ್ರಾಮದ ನಾಯಕ ಜೆ.ಸುಧಾಕರ್, “ನಾವು ಆಕೆಯ ಗೆಲುವಿಗಾಗಿ ಆಶಿಸುತ್ತಿದ್ದೆವು ಹಾಗೂ ದೀಪಾವಳಿಗಿಂತ ಹೆಚ್ಚು ಸಂಭ್ರಮದಿಂದ ಆಕೆಯ ಗೆಲುವನ್ನು ಆಚರಿಸಲು ಯೋಜಿಸಿದ್ದೆವು. ಪಟಾಕಿಗಳನ್ನು ಸಿಡಿಸಲು, ಸಿಹಿಯನ್ನು ಹಂಚಲು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಹಾಗೂ ಸಾಮೂಹಿಕ ಭೋಜನ ಕೂಟವನ್ನು ಆಯೋಜಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೆವು. ಆದರೆ, ಯಶಸ್ಸು ಮತ್ತು ವೈಫಲ್ಯ ಜೀವನದ ಭಾಗವಾಗಿದೆ. ಇದು ಕಠಿಣ ಸ್ಪರ್ಧೆಯಾಗಿದ್ದು, ನೀವು ಆಕೆಯ ಹೋರಾಟದ ಸ್ಫೂರ್ತಿಯನ್ನು ಮೆಚ್ಚಿಕೊಳ್ಳಲೇಬೇಕು. ಆಕೆ ಹೋರಾಟಗಾರ್ತಿಯಾಗಿದ್ದು, ಮತ್ತೆ ಪುಟಿದೇಳಲಿದ್ದಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
ಕಮಲಾ ಹ್ಯಾರಿಸ್ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಈ ಬಾರಿ ಸಾಧ್ಯವಾಗದಿದ್ದರೂ, ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ಗ್ರಾಮಸ್ಥರೂ ವಿಶ್ವಾಸ ವ್ಯಕ್ತಪಡಿಸಿದರು.