ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮುಹಮ್ಮದ್ ಝುಬೈರ್‌ರನ್ನು ಕೋಮು ಸೌಹಾರ್ದ ಪ್ರಶಸ್ತಿಯೊಂದಿಗೆ ಸನ್ಮಾನಿಸಿದ ತಮಿಳುನಾಡು ಸರಕಾರ
ಹೊಸದಿಲ್ಲಿ: ಸತ್ಯ-ಪರೀಕ್ಷಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ಅವರು ತಮಿಳುನಾಡು ಸರಕಾರದ 2024ನೇ ಸಾಲಿನ ಕೊಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಝುಬೈರ್ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ವಿವಿಧ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ ’ಎಂದು ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಲ್ಟ್ ನ್ಯೂಸ್ ವೆಬ್‌ಸೈಟ್‌ನ್ನು ಸೃಷ್ಟಿಸುವ ಮೂಲಕ ಝುಬೈರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಗಳ ಸತ್ಯಾಸತ್ಯತೆಯನ್ನು ವಿಶ್ಲೇಷಿಸಲು ಮತ್ತು ನಿಜವಾದ ಸುದ್ದಿಗಳಿಗೆ ಪ್ರಾಮುಖ್ಯವನ್ನು ನೀಡಲು ಸಾಧನವೊಂದನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಎಂದು ಸನ್ಮಾನ ಪತ್ರದಲ್ಲಿ ಬೆಟ್ಟು ಮಾಡಲಾಗಿದೆ. ಝುಬೈರ್ ಅವರು ಪ್ರತೀಕ್ ಸಿನ್ಹಾ ಅವರೊಂದಿಗೆ ಆಲ್ಟ್ ನ್ಯೂಸ್‌ನ ಸಹಸ್ಥಾಪಕರಾಗಿದ್ದಾರೆ.
ಸಮಾಜದಲ್ಲಿ ಸುಳ್ಳು ಸುದ್ದಿಗಳಿಂದ ಸಂಭವನೀಯ ಹಿಂಸಾಚಾರವನ್ನು ತಡೆಯುವಲ್ಲಿ ಝುಬೈರ್ ಅವರ ಕೆಲಸವು ನೆರವಾಗುತ್ತಿದೆ ಎಂದು ಸನ್ಮಾನ ಪತ್ರದಲ್ಲಿ ಹೇಳಿರುವ ಸರಕಾರವು, 2023,ಮಾರ್ಚ್‌ನಲ್ಲಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ಸುಳ್ಳು ಸುದ್ದಿಯು ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಿಪ್ರವಾಗಿ ಹರಡಿದ್ದಾಗ ದೃಶ್ಯಾವಳಿಯು ತಮಿಳುನಾಡಿನದು ಅಲ್ಲ ಎನ್ನುವುದನ್ನು ಸಾಬೀತುಗೊಳಿಸುವಲ್ಲಿ ವೀಡಿಯೊದ ಸತ್ಯಾಸತ್ಯತೆಯ ಕುರಿತು ಆಲ್ಟ್ ನ್ಯೂಸ್ ನಡೆಸಿದ್ದ ಪರಿಶೀಲನೆಯು ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದು ವಿಶೇಷವಾಗಿ ಹೇಳಿದೆ.
ಇದು ತಮಿಳುನಾಡು ವಿರುದ್ಧ ವದಂತಿಗಳ ಹರಡುವಿಕೆಯನ್ನು ನಿಲ್ಲಿಸಿತ್ತು ಹಾಗೂ ತಮಿಳುನಾಡಿನಲ್ಲಿ ಜಾತಿ,ಧರ್ಮ,ಜನಾಂಗ ಮತ್ತು ಭಾಷೆಯಿಂದಾಗಿ ಹಿಂಸಾಚಾರವನ್ನು ತಡೆಯುವಲ್ಲಿ ನೆರವಾಗಿತ್ತು ಎಂದೂ ಸರಕಾರವು ಹೇಳಿದೆ.
2018ರ ಟ್ವೀಟ್‌ಗಾಗಿ ದಿಲ್ಲಿ ಪೋಲಿಸರು 2022ರಲ್ಲಿ ಝುಬೈರ್‌ರನ್ನು ಬಂಧಿಸಿದ್ದರು. ಟ್ವೀಟ್‌ನಲ್ಲಿ ಝುಬೈರ್ 1983ರ ಹಿಂದಿ ಸಿನೆಮಾವೊಂದರಿಂದ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದರು. ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡುವವರೆಗೂ ಜೈಲಿನಲ್ಲಿದ್ದ ಅವರ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು.
ವೈರಲ್ ಹೇಳಿಕೆಗಳು ಮತ್ತು ತಪ್ಪು ಮಾಹಿತಿಗಳ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಿರುವುದಕ್ಕಾಗಿ ಝುಬೈರ್ ಅವರು ಆಗಾಗ್ಗೆ ಆನ್‌ಲೈನ್‌ನಲ್ಲಿ ಬಲಪಂಥೀಯರಿಂದ ದಾಳಿಗಳಿಗೆ ಗುರಿಯಾಗುತ್ತಿದ್ದಾರೆ.