ತಮಿಳುನಾಡು |ರಾಜ್ಯಗಳ ಹಕ್ಕುಗಳು, ಒಕ್ಕೂಟ ವ್ಯವಸ್ಥೆ ರಕ್ಷಣೆಗೆ ಉನ್ನತ ಮಟ್ಟದ ಸಮಿತಿ ಸ್ಥಾಪಿಸಿದ ಸ್ಟಾಲಿನ್

ಎಮ್.ಕೆ. ಸ್ಟಾಲಿನ್ | PC : PTI
ಚೆನ್ನೈ: ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮಂಗಳವಾರ ಘೋಷಿಸಿದ್ದಾರೆ.
ಕೇಂದ್ರ ಸರಕಾರವು ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಅವರು ಆರೋಪಿಸಿದರು.
‘‘ರಾಜ್ಯಗಳ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಲು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧವನ್ನು ಉತ್ತಮಪಡಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ’’ ಎಂದು ಸ್ಟಾಲಿನ್ ಹೇಳಿದರು.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಸಮಿತಿಯ ನೇತೃತ್ವವನ್ನು ವಹಿಸುವರು. ಮಾಜಿ ಐಎಎಸ್ ಅಧಿಕಾರಿ ಅಶೋಕ್ ವರ್ಧನ ಶೆಟ್ಟಿ ಮತ್ತು ಆರ್ಥಿಕ ತಜ್ಞ ಎಮ್. ನಾಗನಾಥನ್ ಸಮಿತಿಯ ಸದಸ್ಯರಾಗಿರುವರು.
ಶಿಕ್ಷಣ ನೀತಿ, ತೆರಿಗೆ ವ್ಯವಸ್ಥೆ, ಆರ್ಥಿಕ ವಿಕೇಂದ್ರೀಕರಣ ಮತ್ತು ಸಾಂಸ್ಥಿಕ ಸ್ವಾಯತ್ತೆ ವಿಚಾರದಲ್ಲಿ ಡಿಎಮ್‌ಕೆ ಆಳ್ವಿಕೆಯ ತಮಿಳುನಾಡು ಸರಕಾರ ಮತ್ತು ಬಿಜೆಪಿ ಆಳ್ವಿಕೆಯ ಕೇಂದ್ರ ಸರಕಾರದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ.
‘‘ತನ್ನ ಮಗುವಿಗೆ ಯಾವ ಆಹಾರ ಕೊಡಬೇಕು ಎನ್ನುವುದು ತಾಯಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಮಗು ಏನು ತಿನ್ನಬೇಕು, ಅದು ಏನು ಕಲಿಯಬೇಕು ಮತ್ತು ಯಾವ ದಾರಿಯಲ್ಲಿ ಅದು ನಡೆಯಬೇಕು ಎನ್ನುವುದನ್ನು ದಿಲ್ಲಿಯ ಯಾರೋ ಒಬ್ಬರು ನಿರ್ಧರಿಸಿದರೆ, ತಾಯಿಯ ಮಮತೆ ಮತ್ತು ತಾಯಿತನ ಬಂಡೇಳುವುದಿಲ್ಲವೇ?’’ ಎಂದು ಸ್ಟಾಲಿನ್ ಪ್ರಶ್ನಿಸಿದರು.