ತಮಿಳುನಾಡು ಎಂದಿಗೂ ಕೇಂದ್ರ ಸರಕಾರಕ್ಕೆ ಮಣಿಯುವುದಿಲ್ಲ : ಸಿಎಂ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (PTI)
ಹೊಸದಿಲ್ಲಿ: ತಮಿಳುನಾಡು ರಾಜ್ಯ ಕೇಂದ್ರ ಸರಕಾರಕ್ಕೆ ಎಂದಿಗೂ ಮಣಿಯುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ತಿರುವಳ್ಳೂರು ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, 2026ರಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿ ಸರಕಾರ ರಚನೆಯಾಗಲಿದೆ ಎಂದ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ, ತಮಿಳುನಾಡು ದಿಲ್ಲಿಯ ಗದ್ದುಗೆಯಲ್ಲಿರುವವರಿಗೆ ಮುಂದೆ ಎಂದಿಗೂ ಮಣಿಯುವುದಿಲ್ಲ. ಅಮಿತ್ ಶಾ ಮಾತ್ರವಲ್ಲ, ಯಾವುದೇ ಶಾ ತಮಿಳುನಾಡನ್ನು ಆಳಲು ಸಾಧ್ಯವಿಲ್ಲ ಎಂದು ಹೇಳಿದರು.
ತಮಿಳುನಾಡಿನಲ್ಲಿ ನೀಟ್ ಮತ್ತು ಹಿಂದಿಯನ್ನು ಹೇರುವುದಿಲ್ಲ ಎಂದು ರಾಜ್ಯದ ನಿವಾಸಿಗಳಿಗೆ ಭರವಸೆ ನೀಡಬಹುದೇ? ಕ್ಷೇತ್ರಗಳ ಪುನರ್ ವಿಂಗಡನೆಯಿಂದ ತಮಿಳುನಾಡು ಲೋಕಸಭೆ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಬಹುದೇ ಎಂದು ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಶ್ನಿಸಿದ್ದಾರೆ.
ʼನಿಮ್ಮ ಪಕ್ಷ ಒಡೆಯುವ ಸೂತ್ರ ತಮಿಳುನಾಡಿನಲ್ಲಿ ಕೆಲಸ ಮಾಡುವುದಿಲ್ಲ. ನೀವು ಕಾನೂನಾತ್ಮಕವಾಗಿ ಉಂಟುಮಾಡುವ ಎಲ್ಲಾ ಅಡೆತಡೆಗಳನ್ನು ನಾವು ಎದುರಿಸುತ್ತೇವೆʼ ಎಂದು ಸ್ಟಾಲಿನ್ ಹೇಳಿದರು.
2026ರ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಘೋಷಿಸಿದೆ.