ವಿಶಾಖಪಟ್ಟಣಂನಲ್ಲಿ ಟಿಸಿಎಸ್ ಕಂಪನಿಗೆ ಪ್ರತಿ ಎಕರೆಗೆ 99 ಪೈಸೆ ದರಕ್ಕೆ 21.6 ಎಕರೆ ಭೂಮಿ ಮಂಜೂರು ಮಾಡಿದ ಆಂಧ್ರಪ್ರದೇಶ ಸಚಿವ ಸಂಪುಟ!

Update: 2025-04-15 19:46 IST
ವಿಶಾಖಪಟ್ಟಣಂನಲ್ಲಿ ಟಿಸಿಎಸ್ ಕಂಪನಿಗೆ ಪ್ರತಿ ಎಕರೆಗೆ 99 ಪೈಸೆ ದರಕ್ಕೆ 21.6 ಎಕರೆ ಭೂಮಿ ಮಂಜೂರು ಮಾಡಿದ ಆಂಧ್ರಪ್ರದೇಶ ಸಚಿವ ಸಂಪುಟ!
PC : PTI
  • whatsapp icon

ಹೈದರಾಬಾದ್: ಐಟಿ ವಲಯದ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS)ಗೆ ವಿಶಾಖಪಟ್ಟಣಂನಲ್ಲಿ ಪ್ರತಿ ಎಕರೆಗೆ 99 ಪೈಸೆಯ ನಾಮಮಾತ್ರದ ದರ ನಿಗದಿಪಡಿಸಿ, 21.6 ಎಕರೆ ಜಮೀನು ಮಂಜೂರು ಮಾಡಲು ಮಂಗಳವಾರ ನಡೆದ ಆಂಧ್ರಪ್ರದೇಶ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆಂಧ್ರಪ್ರದೇಶದ ಹಿರಿಯ ಅಧಿಕಾರಿಯೊಬ್ಬರು, “ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವ ನಾರಾ ಲೋಕೇಶ್ ಅವರು ವಿಶಾಖಪಟ್ಟಣಂನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಗೆ ಪ್ರತಿ ಎಕರೆಗೆ 99 ಪೈಸೆ ದರದಲ್ಲಿ 21.6 ಎಕರೆ ಜಮೀನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನೊಂದಿಗೆ ಮಾತುಕತೆ ನಡೆಸಿದ ನಾರಾ ಲೋಕೇಶ್ ಅವರು, ವಿಶಾಖಪಟ್ಟಣಂನಲ್ಲಿ ಮಾಹಿತಿ ತಂತ್ರಜ್ಞಾನ ಸೇವೆ ತಾಣವನ್ನು ನಿರ್ಮಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗೆ ನಾಮಮಾತ್ರದ ದರದಲ್ಲಿ ಜಮೀನು ಮಂಜೂರು ಮಾಡುವಂತೆ ಸಚಿವ ಸಂಪುಟದ ಮನವೊಲಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಭವನಕ್ಕೆ ಭೇಟಿ ನೀಡಿದ್ದ ನಾರಾ ಲೋಕೇಶ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯು ಆಂಧ್ರಪ್ರದೇಶದಲ್ಲಿ ಬೃಹತ್ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಬಲಿಷ್ಠ ಭೂಮಿಕೆಯನ್ನು ನಿರ್ಮಿಸುವ ಸಲುವಾಗಿ ಟಾಟಾ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರೊಂದಿಗೆ ಸಭೆ ನಡೆಸಿದ್ದರು. ಆಂಧ್ರಪ್ರದೇಶ ಸರಕಾರದ ಉನ್ನತ ಮೂಲಗಳ ಮಾಹಿತಿಯ ಪ್ರಕಾರ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯು ವಿಶಾಖಪಟ್ಟಣಂನಲ್ಲಿ 1,370 ಕೋಟಿ ರೂ. ಹೂಡಿಕೆ ಮಾಡಲಿದ್ದು, 12,000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿದೆ.

“ರಾಜ್ಯ ಸರಕಾರ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಡುವೆ ನಿರಂತರ ಸಮಾಲೋಚನೆ ಹಾಗೂ ಚರ್ಚೆಗಳನ್ನು ನಡೆಸುವ ಮೂಲಕ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗೆ ಜಮೀನು ಮಂಜೂರಾತಿಯನ್ನು ಅಂತಿಮಗೊಳಿಸುವಲ್ಲಿ ನಾರಾ ಲೋಕೇಶ್ ಯಶಸ್ವಿಯಾಗಿದ್ದಾರೆ. ಈ ದಿಟ್ಟ ನಿರ್ಧಾರದಿಂದ, ಐಟಿ ಹೂಡಿಕೆಗಳನ್ನು ಆಕರ್ಷಿಸಲು ಆಂಧ್ರಪ್ರದೇಶ ಸರಕಾರ ಗಂಭೀರವಾಗಿದೆ ಎಂಬ ಸೂಚನೆ ಉದ್ಯಮಗಳಿಗೆ ರವಾನೆಯಾಗಿದೆ. ಇದಕ್ಕೂ ಮುನ್ನ, ಪ್ರತಿ ಎಕರೆಗೆ 99 ಪೈಸೆ ದರದಲ್ಲಿ ಜಮೀನು ಮಂಜೂರು ಮಾಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ನ ಸಾನಂದಕ್ಕೆ ಟಾಟಾ ಮೋಟಾರ್ಸ್ ಅನ್ನು ಕರೆ ತಂದಿದ್ದರು. ಇದು ಗುಜರಾತ್ ನ ಆಟೊಮೊಬೈಲ್ ಉದ್ಯಮದ ಪಾಲಿಗೆ ಸ್ಮರಣೀಯ ಗಳಿಗೆಯಾಗಿತ್ತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗೆ ಮಾಡಲಾಗಿರುವ ಈ ಜಮೀನು ಮಂಜೂರಾತಿಯನ್ನು ನಾವೂ ಕೂಡಾ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ವಲಯದ ಪಾಲಿಗೆ ಸ್ಮರಣೀಯ ಗಳಿಗೆ ಎಂದು ಭಾವಿಸಿದ್ದೇವೆ” ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಂಧ್ರಪ್ರದೇಶ ಸರಕಾರವು ವಿಶಾಖಪಟ್ಟಣಂನಲ್ಲಿ ‘ದತ್ತಾಂಶ ನಗರ’ವನ್ನು ಸ್ಥಾಪಿಸಲು ಉದ್ದೇಶಿಸಿರುವುದರಿಂದ, ವಿಶಾಖಪಟ್ಟಣಂನಲ್ಲಿ ಸ್ಥಾಪನೆಯಾಗಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಿಂದಾಗಿ, ಆಂಧ್ರಪ್ರದೇಶ ಹಾಗೂ ವಿಶಾಖಪಟ್ಟಣಂಗೆ ಮಹತ್ವದ ಉತ್ತೇಜನ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಜನವರಿ ತಿಂಗಳಲ್ಲಿ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್ ಗೆ ತೆರಳಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ವಿಶಾಖಪಟ್ಟಣಂನಲ್ಲಿ ಸರ್ವರ್ ನಲ್ಲಿ ಬಳಸಲಾಗುವ ಚಿಪ್ ಗಳನ್ನು ಅಭಿವೃದ್ಧಿಪಡಿಸಲು ವಿಶಾಖಪಟ್ಟಣಂನಲ್ಲಿ ವಿನ್ಯಾಸ ಕೇಂದ್ರವನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಗೂಗಲ್ ಕ್ಲೌಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಥಾಮಸ್ ಕುರಿಯನ್ ಅವರಿಗೆ ಮನವಿ ಮಾಡಿದ್ದರು.

ತನ್ನ ಸರ್ವರ್ ಪೂರೈಕೆ ಸರಪಣಿಯನ್ನು ಕ್ರೋಡೀಕರಿಸಲು, ಆ ಮೂಲಕ, ಸರ್ವರ್ ನಿರ್ವಹಣೆ ಸೇವೆಗಳಲ್ಲಿ ಆಂಧ್ರಪಪ್ರದೇಶವನ್ನು ಪ್ರಧಾನ ಕೇಂದ್ರವನ್ನಾಗಿಸಲು ಆಂಧ್ರಪ್ರದೇಶದಲ್ಲಿ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸುವಂತೆಯೂ ಅವರು ಗೂಗಲ್ ಕ್ಲೌಡ್ ಮುಖ್ಯರ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದೂ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದರು.

ಜಾಗತಿಕವಾಗಿ ಕ್ಲೌಡ್ ಪೂರೈಸುವ ಮೂರನೆ ಅತ್ಯಂತ ದೊಡ್ಡ ಸಂಸ್ಥೆಯಾದ ಗೂಗಲ್ ಕ್ಲೌಡ್, ಈಗಾಗಲೇ ದಿಲ್ಲಿ ಹಾಗೂ ಮುಂಬೈನಲ್ಲಿ ಎರಡು ಕ್ಲೌಡ್ ಪ್ರಾಂತ್ಯಗಳನ್ನು ಸ್ಥಾಪಿಸಿದೆ. ಸ್ಥಳೀಯ ಯುವಕರಿಗೆ ಕೌಶಲಾಭಿವೃದ್ಧಿ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ, ವಿಶಾಖಪಟ್ಟಣಂನಲ್ಲಿ ದತ್ತಾಂಶ ಕೇಂದ್ರದ ಸ್ಥಾಪನೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಾಂಶಗಳ ಅಭಿವೃದ್ಧಿಗಾಗಿ ಇತ್ತೀಚೆಗೆ ಗೂಗಲ್ ಕ್ಲೌಡ್ ಕಂಪನಿಯು ಆಂಧ್ರಪ್ರದೇಶ ಸರಕಾರದೊಂದಿಗಿನ ಒಡಂಬಡಿಕೆಗೆ ಸಹಿ ಹಾಕಿತ್ತು.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News