ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ಜೀವ ಬೆದರಿಕೆ

ಗೌತಮ್ ಗಂಭೀರ್ (PTI)
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಜೀವ ಬೆದರಿಕೆ ಇಮೇಲ್ ಸ್ವೀಕರಿಸಿದ್ದಾರೆ. ಈ ಇಮೇಲ್ ನ ವಿಷಯ ಸ್ಥಳದಲ್ಲಿ ‘ISIS’ ಎಂದು ನಮೂದಿಸಲಾಗಿದ್ದು, ‘I kill you’ ಎಂಬ ಸಂದೇಶವಿದೆ.
ಈ ಜೀವ ಬೆದರಿಕೆಯ ಬೆನ್ನಿಗೇ, ಗೌತಮ್ ಗಂಭೀರ್ ಅವರು ರಾಜೇಂದ್ರ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಕುರಿತು ಈವರೆಗೆ ಅಧಿಕೃತವಾಗಿ ಯಾವುದೇ ಪ್ರಕರಣ ದಾಖಲಾಗಿರದಿದ್ದರೂ, ಇಮೇಲ್ ಮೂಲ ಹಾಗೂ ಅದನ್ನು ರವಾನಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಸೈಬರ್ ಘಟಕ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವರದಿಯಾಗಿದೆ.
26 ಮಂದಿಯನ್ನು ಬಲಿ ತೆಗೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದ ಎರಡೇ ದಿನಗಳ ಅಂತರದಲ್ಲಿ ಈ ಜೀವ ಬೆದರಿಕೆ ಇಮೇಲ್ ಬಂದಿದೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಮಂಗಳವಾರ ತಮ್ಮ ಎಕ್ಸ್ ಖಾತೆಯಲ್ಲಿ ಖಂಡಿಸಿದ್ದ ಗೌತಮ್ ಗಂಭೀರ್, “ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಈ ಘಟನೆಗೆ ಕಾರಣರಾದವರು ಬೆಲೆ ತೆರಲಿದ್ದಾರೆ. ಭಾರತ ತಿರುಗೇಟು ನೀಡಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.