ತೆಲಂಗಾಣ: ಬಿಸಿಲಿನ ಝಳಕ್ಕೆ 12ಕ್ಕೂ ಅಧಿಕ ಜನರು ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಹೈದರಾಬಾದ್: ಉತ್ತರ ಹಾಗೂ ಕೇಂದ್ರ ತೆಲಂಗಾಣದಲ್ಲಿ ಬಿಸಿಲಿನ ಝಳಕ್ಕೆ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.
ಅತ್ಯಧಿಕ ತಾಪಮಾನ ದಾಖಲಾದ ಆದಿಲಾಬಾದ್ ಹಾಗೂ ನಿಝಾಮಾಬಾದ್ ವಲಯಗಳಲ್ಲಿ ಅತ್ಯಧಿಕ ಸಾವುಗಳು ದಾಖಲಾಗಿವೆ.
ಒಂದೇ ಜಿಲ್ಲೆಯಲ್ಲಿ ಇಬ್ಬರು ಸಹೋದರರು ಒಂದೇ ದಿನ ಪ್ರಾಣ ಕಳೆದುಕೊಂಡಿದ್ದಾರೆ. ಸಹೋದರರಾದ ಶಂಕರ್ ಹಾಗೂ ರಾಜು ಮಧ್ಯಾಹ್ನ ಹೊರಗೆ ಹೋಗಿದ್ದರು. ಅವರು ಹಿಂದಿರುಗಿದಾಗ ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದ ಹೊರತಾಗಿಯೂ ಅವರು ಬದುಕಿ ಉಳಿಯಲಿಲ್ಲ. ಇಬ್ಬರೂ 40 ವರ್ಷದವರು. ಸಾವಿಗೆ ಬಿಸಿಲಿನ ಆಘಾತ ಕಾರಣ ಎಂದು ಹೇಳಲಾಗಿದೆ. ಗುರುವಾರ 20 ವರ್ಷದ ಯುವಕನೋರ್ವ ಕೂಡ ಸಾವನ್ನಪ್ಪಿದ್ದಾನೆ. ತೀವ್ರ ನಿರ್ಜಲೀಕರಣದಿಂದ ಯುವಕ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಿಸಿಲಾಘಾತದಿಂದ ಸಾವು ಸಂಭವಿಸಿದ ಪ್ರಕರಣಗಳು ಕರೀಂನಗರ್ ಜಿಲ್ಲೆಯಲ್ಲಿ ಕೂಡ ವರದಿಯಾಗಿದೆ. ಇಲ್ಲಿ 20ರ ಹರೆಯದ ಕೃಷಿ ಕಾರ್ಮಿಕನೋರ್ವ ಮೃತಪಟ್ಟಿದ್ದಾನೆ. ಬಿಸಿಲಿನ ಆಘಾತದಿಂದ ಆದಿಲಾಬಾದ್, ಖಮ್ಮಮ್, ನಾಗರಕುರ್ನೂಲ್ ಹಾಗೂ ಮೆಹಬೂಬ್‌ನಗರ ಜಿಲ್ಲೆಗಳಲ್ಲಿ ಹಲವು ಸಾವುಗಳು ಸಂಭವಿಸಿವೆ.
ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳದಂತೆ, ಸಾಕಷ್ಟು ನೀರು ಕುಡಿಯುವಂತೆ ಹಾಗೂ ಬಿಸಿಲಿನ ಆಘಾತಕ್ಕೆ ಒಳಗಾಗಿರುವ ಸಂದೇಹ ಉಂಟಾದರೆ ಕೂಡಲೇ ವೈದ್ಯಕೀಯ ತಪಾಸಣೆ ಕೋರುವಂತೆ ತೆಲಂಗಾಣದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.