ಭಾರತ ಭೇಟಿಯನ್ನು ಮುಂದೂಡಿದ ಎಲಾನ್ ಮಸ್ಕ್

Update: 2024-04-20 11:03 GMT

ಎಲಾನ್ ಮಸ್ಕ್ (PTI)

ಹೊಸದಿಲ್ಲಿ: ಅಮೆರಿಕದ ಟೆಕ್ ಬಿಲಿಯಾಧೀಶ ಎಲಾನ್ ಮಸ್ಕ್ ಅವರು ಟೆಸ್ಲಾದ ಅನಿವಾರ್ಯ ಕಾರ್ಯಭಾರಗಳಿಂದಾಗಿ ಭಾರತಕ್ಕೆ ತನ್ನ ಉದ್ದೇಶಿತ ಭೇಟಿಯನ್ನು ಮುಂದೂಡಿರುವುದಾಗಿ ಶನಿವಾರ ತಿಳಿಸಿದ್ದಾರೆ.

ಇಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾದ ಸಿಇಒ ಮಸ್ಕ್ ಎ.21 ಮತ್ತು 22ರಂದು ಭಾರತದಲ್ಲಿರಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ,ಈ ವರ್ಷದ ಕೊನೆಯಲ್ಲಿ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್ ಇಂದು ಬೆಳಿಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಮಸ್ಕ್ ಅವರ ಎ.21-22ರ ಭಾರತ ಭೇಟಿಯನ್ನು ಮುಂದೂಡಲಾಗಿದೆ, ಬಹುಶಃ ಎ.23ರಂದು ಟೆಸ್ಲಾದ ತ್ರೈಮಾಸಿಕ ವರದಿ ಮಂಡನೆ ಸಂದರ್ಭದಲ್ಲಿ ಮಸ್ಕ್ ಉಪಸ್ಥಿತಿಯ ಅಗತ್ಯವಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, ‘ದುರದೃಷ್ಟವಶಾತ್ ಟೆಸ್ಲಾದ ಹೆಚ್ಚಿನ ಕಾರ್ಯಭಾರಗಳು ಭಾರತ ಭೇಟಿಯನ್ನು ವಿಳಂಬಿಸುವುದನ್ನು ಅನಿವಾರ್ಯವಾಗಿಸಿವೆ, ಆದರೆ ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವುದನ್ನು ನಾನು ಕಾತುರದಿಂದ ಎದುರು ನೋಡುತ್ತಿದ್ದೇನೆ’ಎಂದು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಎಕ್ಸ್ ಪೋಸ್ಟ್‌ನಲ್ಲಿ ತನ್ನ ಭಾರತ ಭೇಟಿಯನ್ನು ದೃಢಪಡಿಸಿದ್ದ ಮಸ್ಕ್, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದರು.

ಮಸ್ಕ್ ಕಳೆದ ವರ್ಷದ ಜೂನ್‌ನಲ್ಲಿ ಮೋದಿಯವರ ಅಮೆರಿಕ ಭೇಟಿ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದರು. ತಾನು 2024ರಲ್ಲಿ ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದೇನೆ ಎಂದು ಆಗ ಹೇಳಿದ್ದ ಮಸ್ಕ್, ಟೆಸ್ಲಾ ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಮಸ್ಕ್ ಉದ್ದೇಶಿತ ಭೇಟಿಯು ಅವರ ಸ್ಯಾಟ್‌ಕಾಮ್ ಉದ್ಯಮ ಸ್ಟಾರ್‌ಲಿಂಕ್ ಜೊತೆಗೆ ಟೆಸ್ಲಾದ ಭಾರತ ಪ್ರವೇಶದ ಕುರಿತು ಯೋಜನೆಗಳನ್ನು ಅವರು ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಭಾರತದಲ್ಲಿ ಟೆಸ್ಲಾದ ತಯಾರಿಕೆ ಘಟಕ,ಅದಕ್ಕಾಗಿ ಬಿಲಿಯಗಟ್ಟಲೆ ಡಾಲರ್‌ಗಳ ಹೂಡಿಕೆ ಮತ್ತು ಟೆಸ್ಲಾ ಇಲೆಕ್ಟ್ರಿಕ್ ಕಾರುಗಳ ಮಾರಾಟ ಕುರಿತು ಯೋಜನೆಗಳನ್ನು ಮಸ್ಕ್ ಪ್ರಕಟಿಸಲಿದ್ದಾರೆ ಎಂದೂ ನಿರೀಕ್ಷಿಸಲಾಗಿತ್ತು.

ಇಲೆಕ್ಟ್ರಿಕ್ ಕಾರುಗಳು ಮಾತ್ರವಲ್ಲ,ತನ್ನ ಸ್ಯಾಟ್‌ಲೈಟ್ ಇಂಟರ್ನೆಟ್ ಉದ್ಯಮ ಸ್ಟಾರ್‌ಲಿಂಕ್‌ಗಾಗಿಯೂ ಮಸ್ಕ್ ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿರಿಸಿದ್ದಾರೆ,ಇದಕ್ಕಾಗಿ ಸರಕಾರದ ಅನುಮತಿಗಳಿಗಾಗಿ ಕಾಯಲಾಗುತ್ತಿದೆ.

ದೇಶದಲ್ಲಿ ಟೆಸ್ಲಾ ಕಾರುಗಳ ಮಾರಾಟ ಸಾಧ್ಯವಾಗಿಸಲು ಭಾರತದಲ್ಲಿಯ ಆಮದು ಸುಂಕವನ್ನು ಕಡಿತಗೊಳಿಸುವಂತೆ ಮಸ್ಕ್ ಈ ಹಿಂದೆ ಕರೆ ನೀಡಿದ್ದರು.

ಮಸ್ಕ್ ಉದ್ದೇಶಿತ ಭಾರತ ಭೇಟಿಗೆ ಕೆಲವು ವಾರಗಳ ಮುನ್ನ ಸರಕಾರವು ನೂತನ ವಿದ್ಯುತ್ ವಾಹನ ನೀತಿಯನ್ನು ಪ್ರಕಟಿಸಿತ್ತು, ಈ ನೀತಿಯಡಿ ಕನಿಷ್ಠ 500 ಡಾ.ಹೂಡಿಕೆಯೊಂದಿಗೆ ದೇಶದಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕ ರಿಯಾಯಿತಿಗಳನ್ನು ನೀಡಲಾಗುವುದು. ಈ ಕ್ರಮವು ಟೆಸ್ಲಾದಂತಹ ಪ್ರಮುಖ ಜಾಗತಿಕ ಕಂಪನಿಗಳನ್ನು ಭಾರತದತ್ತ ಆಕರ್ಷಿಸುವ ಉದ್ದೇಶವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News