ಈಡಿಯನ್ನು ಮುಚ್ಚಬೇಕು: ಅಖಿಲೇಶ್‌ ಯಾದವ್‌

Update: 2025-04-16 21:24 IST
ಈಡಿಯನ್ನು ಮುಚ್ಚಬೇಕು: ಅಖಿಲೇಶ್‌ ಯಾದವ್‌

ಅಖಿಲೇಶ್‌ ಯಾದವ್‌ | PC : PTI 

  • whatsapp icon

ಭುವನೇಶ್ವರ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತು ಮತ್ತೆ ಎದ್ದಿರುವ ರಾಜಕೀಯ ಬಿರುಗಾಳಿಯ ನಡುವೆಯೇ ಎಸ್‌ಪಿ ಅಧ್ಯಕ್ಷ ಹಾಗೂ ಮಾಜಿ ಉ.ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು, ಜಾರಿ ನಿರ್ದೇಶನಾಲಯ(ಈಡಿ)ವು ಪ್ರತಿಪಕ್ಷ ನಾಯಕರಿಗೆ ಕಿರುಕುಳ ನೀಡಲು ಮತ್ತು ಅವರ ಧ್ವನಿಯನ್ನಡಗಿಸಲು ಕೇಂದ್ರದ ಬಳಿಯಿರುವ ಸಾಧನವಾಗಿರುವುದರಿಂದ ಅದನ್ನು ಮುಚ್ಚಬೇಕು ಎಂದು ಬುಧವಾರ ಇಲ್ಲಿ ಪ್ರತಿಪಾದಿಸಿದರು.

ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶ್ರೀಕಾಂತ ಜೆನಾ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಾದವ್‌, ಆರ್ಥಿಕ ಅಪರಾಧಗಳನ್ನು ನಿಭಾಯಿಸಲು ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಪ್ರಾಧಿಕಾರಗಳಂತಹ ಹಲವಾರು ಸಂಸ್ಥೆಗಳಿರುವುದರಿಂದ ಈಡಿಯ ಅಗತ್ಯವೇ ಇಲ್ಲ ಎಂದು ಹೇಳಿದರು.

ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲಿಸಿರುವ ಈಡಿಕ್ರಮದ ಕುರಿತು ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಎಸ್‌ಪಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಈಡಿ ರಚನೆಯನ್ನು ವಿರೋಧಿಸಿದ್ದವು ಮತ್ತು ಅದು ನಂತರ ನಿಮ್ಮ ವಿರುದ್ಧವೇ ಬಳಕೆಯಾಗಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದವು ಎಂದರು.

ಮಹಾರಾಷ್ಟ್ರವನ್ನು ಉಲ್ಲೇಖಿಸಿದ ಯಾದವ್‌ ,‘ಬಿಜೆಪಿ ವಿರುದ್ಧ ಮಾತನಾಡಿದ್ದ ನಾಯಕರನ್ನು ನಂತರ ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಏಜೆನ್ಸಿಗಳು ಗುರಿಯಾಗಿಸಿಕೊಂಡಿದ್ದವು. ನನ್ನ ಪ್ರಕಾರ ಈಡಿಯನ್ನು ಮುಚ್ಚಬೇಕು. ಈ ಬಗ್ಗೆ ಆಗ್ರಹಿಸುವಂತೆ ನಾನು ಕಾಂಗ್ರೆಸ್ ಪಕ್ಷವನ್ನೂ ಕೇಳಿಕೊಳ್ಳುತ್ತೇನೆ. ಇಂತಹ ಏಜೆನ್ಸಿ ಅಸ್ತಿತ್ವದಲ್ಲಿದ್ದರೆ ನೀವು ನಿಮ್ಮದೇ ಕಾರ್ಯವಿಧಾನಗಳನ್ನೂ ನಂಬುವುದಿಲ್ಲ ಎಂದು ಅರ್ಥ’ ಎಂದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News