ದೇಶದ ಯಾವುದೇ ಭಾಗದಲ್ಲಿ ನಿವಾಸಿಗೆ ಇಡೀ ದೇಶವೇ ಮನೆಯಾಗಿದೆ: ನಿಯೋಜಿತ ಸಿಜೆಐ ಬಿ.ಆರ್. ಗವಾಯಿ
ಜಸ್ಟಿಸ್ ಬಿ.ಆರ್. ಗವಾಯಿ (PTI)
ಅಹ್ಮದಾಬಾದ್: ಗುಜರಾತಿನ ನರ್ಮದಾ ಜಿಲ್ಲೆಯ ಏಕತಾ ನಗರ(ಹಿಂದಿನ ಕೆವಾಡಿಯಾ)ದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಪುನರ್ವಸತಿ ಶಿಬಿರಗಳಿಗೆ ಭೇಟಿ ನೀಡಿದ್ದ ಅನುಭವವನ್ನು ನೆನಪಿಸಿಕೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್.ಗವಾಯಿ ಅವರು,‘ಭಾರತದ ಯಾವುದೇ ಭಾಗದ ನಿವಾಸಿಗೆ ಇಡೀ ದೇಶವೇ ಮನೆಯಾಗಿದೆ’ ಎಂದು ಹೇಳಿದರು.
ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾಗಿರುವ ನ್ಯಾ.ಗವಾಯಿ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸ್ಥಾಪನೆಯ 30ನೇ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಪಶ್ಚಿಮ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಭಾಗವಾಗಿ ದೇಶದ ಅತ್ಯಂತ ದೂರದ ಭಾಗಗಳಿಗೆ ಪ್ರಯಾಣಿಸಿದ್ದ ಅನುಭವವನ್ನು ಹಂಚಿಕೊಂಡ ನ್ಯಾ.ಗವಾಯಿ, ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷನಾಗಿ ಅಧಿಕಾರವನ್ನು ವಹಿಸಿಕೊಂಡ ಬಳಿಕ ತಾನು ದಿಲ್ಲಿಯಲ್ಲಿ ಒಂದೇ ಒಂದೂ ವಾರಾಂತ್ಯವನ್ನು ಕಳೆದಿಲ್ಲ ಎಂದು ಹೇಳಿದರು.
ಈಶಾನ್ಯ ರಾಜ್ಯಗಳಿಗೆ ತನ್ನ ಪ್ರವಾಸಗಳನ್ನು ನೆನಪಿಸಿಕೊಂಡ ಅವರು,ಮಣಿಪುರದ ಸಂಘರ್ಷನಿರತ ಜನಾಂಗೀಯ ಗುಂಪುಗಳ ಶಿಬಿರಗಳಿಗೆ ಭೇಟಿ ನೀಡಿದ್ದನ್ನು ಮತ್ತು ಹಾರ್ದಿಕ ಸ್ವಾಗತವನ್ನು ಸ್ವೀಕರಿಸಿದ್ದ ಅನುಭವವನ್ನು ಹಂಚಿಕೊಂಡರು.
‘‘ನಾವು ಮಣಿಪುರಕ್ಕೆ ಹೋಗಿದ್ದೆವು. ಕಳೆದ 2-3 ವರ್ಷಗಳಲ್ಲಿ ಮಣಿಪುರವು ಎರಡು ಜನಾಂಗೀಯ ಗುಂಪುಗಳ ನಡುವೆ ವಿವಾದದ ಸಮಸ್ಯೆಯಲ್ಲಿ ತೊಳಲಾಡುತ್ತಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ನಾವು ಸಂಘರ್ಷನಿರತ ಕುಕಿಗಳು ಮತ್ತು ಮೈತೈ ಗುಂಪುಗಳನ್ನು ಭೇಟಿಯಾಗಿದ್ದೆವು. ನಾವು ಅವರಿಗೆ ಕಾನೂನು ನೆರವು ಸಾಹಿತ್ಯಗಳು,ವೈದ್ಯಕೀಯ ಉಪಕರಣ ಮತ್ತು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದೆವು. ಆ ಸಂದರ್ಭದಲ್ಲಿ ನಾವು ತುಂಬ ಭಾವುಕರಾಗಿದ್ದೆವು, ನಾವು ಕುಕಿ ಶಿಬಿರಕ್ಕೆ ಹೋಗಿದ್ದಾಗ ಹಿರಿಯ ಮಹಿಳೆಯೋರ್ವರು ‘ನಮ್ಮ ಮನೆಗೆ ನಿಮಗೆ ಸ್ವಾಗತ’ ಎಂದು ಹೇಳುವ ಮೂಲಕ ನಮ್ಮನ್ನು ಬರಮಾಡಿಕೊಂಡಿದ್ದರು’’ಎಂದು ನೆನಪಿಸಿಕೊಂಡ ನ್ಯಾ.ಗವಾಯಿ, ‘ಭಾರತವು ನಮ್ಮ ಮನೆಯಾಗಿದೆ. ದೇಶದ ಯಾವುದೇ ಭಾಗದಲ್ಲಿ ವಾಸವಾಗಿರುವ ಪ್ರತಿಯೊಬ್ಬ ಭಾರತೀಯನಿಗೂ ಇಡೀ ದೇಶವೇ ಮನೆಯಾಗಿದೆ’ಎಂದು ಹೇಳಿದರು.
ಈಶಾನ್ಯದಲ್ಲಿ ಬುಡಕಟ್ಟು ಜನಾಂಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದ್ದೇನೆ ಎಂದ ನ್ಯಾ.ಗವಾಯಿ ಕಾನೂನು ಹಕ್ಕುಗಳ ಕುರಿತು ಜಾಗ್ರತಿ ಮೂಡಿಸುವುದಕ್ಕೆ ಒತ್ತು ನೀಡಿದರು.
‘‘ನಾವು ಅರುಣಾಚಲ ಪ್ರದೇಶ,ನಾಗಾಲ್ಯಾಂಡ್ ಮತ್ತು ಮಣಿಪುರದ ಮೂಲೆ ಮೂಲೆಗಳಿಗೆ ಹೋಗಿ ಬುಡಕಟ್ಟು ಜನಾಂಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದ್ದೇವೆ. ನಾವು ‘ಸಂವಾದ್’ ತಂಡವನ್ನು ರಚಿಸಿದ್ದು,ಅಲ್ಲಿ ಬುಡಕಟ್ಟು ಜನರಿಗೆ ಲಭ್ಯವಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಮತ್ತು ಅವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದನ್ನು ಸಾಧ್ಯವಾಗಿಸಲಾಗುತ್ತದೆ. ಹಕ್ಕುಗಳನ್ನಷ್ಟೇ ಹೊಂದಿರುವುದು ಸಾಲದು,ನಾಗರಿಕರಿಗೆ ತಮ್ಮ ಹಕ್ಕುಗಳ ಬಗ್ಗೆ-ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಶಾಸನಬದ್ಧ ಹಕ್ಕುಗಳ ಬಗ್ಗೆ ತಿಳಿದಿರುವುದೂ ಅಗತ್ಯವಿದೆ. ಅವರಲ್ಲಿ ಅರಿವು ಮೂಡಿಸದಿದ್ದರೆ ತಮ್ಮ ಹಕ್ಕುಗಳನ್ನು ಚಲಾಯಿಸಲು ಅವರು ಮುಂದೆ ಬರುವುದಿಲ್ಲ ’’ ಎಂದು ಹೇಳಿದರು.
ಭಾರತದ ಏಕೀಕರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಉಲ್ಲೇಖಿಸಿದ ನ್ಯಾ.ಗವಾಯಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 30ನೇ ವರ್ಷಾಚರಣೆಗೆ ಏಕತಾ ಪ್ರತಿಮೆಗಿಂತ ಉತ್ತಮ ಸ್ಥಳ ಬೇರೊಂದಿಲ್ಲ ಎಂದು ಹೇಳಿದರು.