ದುಡ್ಡಿಗಾಗಿ ಪುತ್ರ ಮಾಡಿದ ಅಪಹರಣದ ನಾಟಕದಿಂದ ತಂದೆ ತಲೆ ಮೇಲೆ ಬಿತ್ತು ಜಾಮೀನು ವೆಚ್ಚದ ಹೊರೆ!

Update: 2025-03-13 16:48 IST
ದುಡ್ಡಿಗಾಗಿ ಪುತ್ರ ಮಾಡಿದ ಅಪಹರಣದ ನಾಟಕದಿಂದ ತಂದೆ ತಲೆ ಮೇಲೆ ಬಿತ್ತು ಜಾಮೀನು ವೆಚ್ಚದ ಹೊರೆ!

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಭಡೋಹಿ: ತನ್ನ ತಂದೆಯಿಂದ ದುಡ್ಡು ಪಡೆಯಲು ತನ್ನ ಕುಟುಂಬದೆದುರು ತನ್ನ ಅಪಹರಣದ ನಾಟಕವಾಡಿದ್ದ ಯುವಕನೊಬ್ಬನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದು, ತಮ್ಮ ಪುತ್ರನ ಈ ನಕಲಿ ನಾಟಕದಿಂದ ಆತನ ತಂದೆಗೆ ಜಾಮೀನು ವೆಚ್ಚವನ್ನು ಭರಿಸಬೇಕಾಗಿ ಬಂದ ಘಟನೆ ವರದಿಯಾಗಿದೆ.

ಬಂಧಿತ ಯುವಕನನ್ನು ಉತ್ತರ ಪ್ರದೇಶದ ಭಡೋಹಿ ನಿವಾಸಿ ಪ್ರದೀಪ್ ಚೌಹಾಣ್ (28) ಎಂದು ಗುರುತಿಸಲಾಗಿದ್ದು, ಮಾರ್ಚ್ 7ರಂದು ನನ್ನನ್ನು ಅಪಹರಿಸಲಾಗಿದೆ ಎಂದು ತನ್ನ ತಂದೆಗೆ ಸಂದೇಶ ರವಾನಿಸಿದ್ದ. ಆನಂತರ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಿದ್ದ. ಇದರಿಂದ ಆತಂಕಕ್ಕೊಳಗಾದ ಆತನ ತಂದೆ ರಾಮಶಂಕರ್ ಚೌಹಾಣ್, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದರ ಬೆನ್ನಿಗೇ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ಹಿಂಜೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರದೀಪ್ ಚೌಹಾಣ್ ನ ಮೊಬೈಲ್ ಲೊಕೇಶನ್ ಇರುವುದನ್ನು ಪತ್ತೆ ಹಚ್ಚಿದ್ದರು. ಈ ಮಾಹಿತಿಯನ್ನು ಆಧರಿಸಿ ಪುಣೆಯಲ್ಲಿ ಅಡಗಿಕೊಂಡಿದ್ದ ಆತನನ್ನು ಬಂಧಿಸಿದ್ದ ಪುಣೆ ಪೊಲೀಸರು, ನಂತರ, ಆತನನ್ನು ಉತ್ತರ ಪ್ರದೇಶ ಪೊಲೀಸರ ವಶಕ್ಕೆ ಹಸ್ತಾಂತರಿಸಿದ್ದರು.

ಇದೀಗ ಪ್ರದೀಪ್ ಚೌಹಾಣ್ ನನ್ನು ಭಡೋಹಿ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ವಿಚಾರಣೆಯ ವೇಳೆ, ನಾನು ಸ್ವಯಂಪ್ರೇರಿತವಾಗಿ ಮನೆ ತೊರೆದಿದ್ದು, ನನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂದು ಆತ ಒಪ್ಪಿಕೊಂಡಿದ್ದಾನೆ. ನನ್ನ ತಂದೆಯಿಂದ ಹಣ ಪಡೆಯಲು ನಾನು ಅವರಿಗೆ ಸುಳ್ಳು ಅಪಹರಣದ ಸಂದೇಶ ರವಾನಿಸಿದ್ದೆ ಎಂದೂ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ಪೊಲೀಸರ ಬಂಧನದಲ್ಲಿದ್ದ ತಮ್ಮ ಪುತ್ರನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳದಲು ರಾಮಶಂಕರ್ ಚೌಹಾಣ್ ಅವರಿಗೆ ಹಣ ವ್ಯಯಿಸಬೇಕಾಗಿ ಬಂದಿದೆ. ಹೋಳಿ ಹಬ್ಬವಿರುವುದರಿಂದ ನನ್ನ ಪುತ್ರನನ್ನು ಬಿಡುಗಡೆಗೊಳಿಸಿ ಎಂಬ ರಾಮಶಂಕರ್ ಚೌಹಾಣ್ ರ ಮನವಿಯನ್ನು ಪುರಸ್ಕರಿಸಿದ ಪೊಲೀಸರು, ಪ್ರದೀಪ್ ಚೌಹಾಣ್ ವಿರುದ್ಧದ ಪ್ರಕರಣ ಜಾಮೀನುಸಹಿತವಾಗಿದ್ದುದರಿಂದ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News