ಸ್ವಾತಂತ್ರ್ಯದ ಬಳಿಕ ಅಧಿಕಾರಕ್ಕೆ ಬಂದಿದ್ದ ಸರಕಾರಗಳು ನಮ್ಮ ಸಂಸ್ಕೃತಿಯ ಬಗ್ಗೆ ನಾಚಿಕೆಪಡತೊಡಗಿದ್ದವು : ಪ್ರಧಾನಿ ಟೀಕೆ
ಗುವಾಹಟಿ : ರವಿವಾರ ಇಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದಿದ್ದ ಸರಕಾರಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತಿದ್ದವು. ಆದರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.
ಅಸ್ಸಾಮಿನಲ್ಲಿ 11,600 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಸ್ವಾತಂತ್ರ್ಯದ ನಂತರ ವರ್ಷಗಳ ಕಾಲ ಅಧಿಕಾರದಲ್ಲಿದ್ದವರಿಗೆ ಧಾರ್ಮಿಕ ಸ್ಥಳಗಳ ಮಹತ್ವವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ರಾಜಕೀಯ ಲಾಭಗಳಿಗಾಗಿ ಅವರು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ಯಾವುದೇ ದೇಶವು ತನ್ನ ಇತಿಹಾಸವನ್ನು ಕಡೆಗಣಿಸಿ ಪ್ರಗತಿ ಹೊಂದಲು ಸಾಧ್ಯವಿಲ್ಲ,ಆದರೆ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಪರಿಸ್ಥಿತಿ ಬದಲಾಗಿದೆ ’ ಎಂದು ಹೇಳಿದರು.
ಇಂದು ಉದ್ಘಾಟನೆಗೊಂಡ ಅಭಿವೃದ್ಧಿ ಯೋಜನೆಗಳು ದಕ್ಷಿಣ ಏಶ್ಯಾದ ಇತರ ದೇಶಗಳೊಂದಿಗೆ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಸಂಪರ್ಕವನ್ನು ಬಲಗೊಳಿಸುತ್ತವೆ. ಈ ಯೋಜನೆಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ ಎಂದು ಹೇಳಿದ ಮೋದಿ, ಡಬಲ್ ಇಂಜಿನ್ ಸರಕಾರವು ರಾಜ್ಯದಲ್ಲಿ ಅಭಿವೃದ್ಧಿಯನ್ನು ತಂದಿದೆ. ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಕೇವಲ ಆರು ಮೆಡಿಕಲ್ ಕಾಲೇಜುಗಳಿದ್ದು, ಈಗ ಅವುಗಳ ಸಂಖ್ಯೆ 12ಕ್ಕೇರಿದೆ. ಅಸ್ಸಾಂ ಇಂದು ಈಶಾನ್ಯ ಭಾರತದಲ್ಲಿ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗುತ್ತಿದೆ ಎಂದರು.
ಪ್ರಧಾನಿ ಇಂದು ಉದ್ಘಾಟಿಸಿದ ಯೋಜನೆಗಳಲ್ಲಿ ಕೆಲವು ರಾಜ್ಯಸರಕಾರದ ಹಣದಿಂದ ನಿರ್ಮಾಣಗೊಂಡಿದ್ದರೆ ಕೆಲವು ಕೇಂದ್ರದಿಂದ ಅನುದಾನಿತವಾಗಿವೆ.
ಮೋದಿ ಕಾಮಾಖ್ಯ ದೇವಸ್ಥಾನ ಕಾರಿಡಾರ್ (498 ಕೋಟಿ ರೂ.), ಗುವಾಹಟಿಯಲ್ಲಿ ನೂತನ ವಿಮಾನ ನಿಲ್ದಾಣ ಟರ್ಮಿನಲ್ನಿಂದ ಷಟ್ಪಥ ರಸ್ತೆ (358 ಕೋಟಿ ರೂ.), ಫಿಫಾ ಗುಣಮಟ್ಟಕ್ಕನುಗುಣವಾಗಿ ನೆಹರು ಕ್ರೀಡಾಂಗಣದ ಉನ್ನತೀಕರಣ (831 ಕೋಟಿ ರೂ.) ಮತ್ತು ಚಂದ್ರಾಪುರದಲ್ಲಿ ನೂತನ ಕ್ರೀಡಾ ಸಂಕೀರ್ಣ ನಿರ್ಮಾಣ (300 ಕೋಟಿ ರೂ.) ಸೇರಿದಂತೆ ಕೆಲವು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸವನ್ನೂ ನೆರವೇರಿಸಿದರು.
3,444 ಕೋಟಿ ರೂ.ವೆಚ್ಚದ ‘ಅಸೋಮ್ ಮಾಲಾ ’ರಸ್ತೆಗಳ ಎರಡನೇ ಹಂತದ ನಿರ್ಮಾಣಕ್ಕೂ ಮೋದಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಪ್ರಧಾನಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ನಗರದಲ್ಲಿ ರೋಡ್ ಶೋ ನಡೆಸಿದರು.