ರಾಜ್ಯಸಭೆಯಲ್ಲಿ ಎನ್ ಡಿಎ ಬಹುಮತಕ್ಕೆ ನಾಲ್ಕು ಸ್ಥಾನವಷ್ಟೇ ಕೊರತೆ

Update: 2024-02-28 03:57 GMT

Photo: TOI

ಹೊಸದಿಲ್ಲಿ: ಮುಂದಿನ ಏಪ್ರಿಲ್ ನಲ್ಲಿ ಅಧಿಕಾರಾವಧಿ ಮುಗಿಯುವ 56 ಮಂದಿ ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಬಹುಮತದ ಸನಿಹಕ್ಕೆ ಬಂದಿದೆ. ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತಕ್ಕೆ 121 ಸ್ಥಾನಗಳ ಅಗತ್ಯವಿದ್ದು, ಎನ್ ಡಿಎ ಇದೀಗ 117 ಸದಸ್ಯಬಲ ಹೊಂದಿದೆ.

240 ಸದಸ್ಯಬಲದ ಸದನದಲ್ಲಿ ಬಿಜೆಪಿ 97 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಐದು ಮಂದಿ ನಾಮನಿರ್ದೇಶನ ಸದಸ್ಯರು ಈಗಾಗಲೇ ಬಿಜೆಪಿ ಸೇರಿದ್ದಾರೆ. 29 ಸ್ಥಾನಗಳೊಂದಿಗೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಮಂಗಳವಾರದ ಚುನಾವಣೆಯಲ್ಲಿ ಅಡ್ಡಮತದಾನದ ಪರಿಣಾಮ ಬಿಜೆಪಿಗೆ ಹಿಮಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ತಲಾ ಒಂದು ಹೆಚ್ಚುವರಿ ಸ್ಥಾನಗಳು ಲಭ್ಯವಾಗಿವೆ.

ಚುನಾವಣೆಯಲ್ಲಿ ಆಯ್ಕೆಯಾದ 56 ಮಂದಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸದನದ ಸಂಖ್ಯಾಬಲ 240 ಆಗಲಿದ್ದು, ಐದು ಸ್ಥಾನಗಳಷ್ಟೇ ಖಾಲಿ ಉಳಿಯಲಿವೆ. ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು ಹಾಗೂ ನಾಮನಿರ್ದೇಶನ ವರ್ಗದಲ್ಲಿ ಒಂದು ಸ್ಥಾನ ಖಾಲಿ ಉಳಿಯಲಿದೆ. 56 ಸ್ಥಾನಗಳ ಪೈಕಿ 41 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರ ಪ್ರದೇಶದ ಹತ್ತು, ಕರ್ನಾಟಕದ ನಾಲ್ಕು ಮತ್ತು ಹಿಮಾಚಲ ಪ್ರದೇಶದ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ 30 ಸ್ಥಾನಗಳನ್ನು ಗೆದ್ದಿದೆ.

ಚುನಾವಣೆ ನಡೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 10 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ತಲಾ ಆರು, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಐದು, ಕರ್ನಾಟಕ ಹಾಗೂ ಗುಜರಾತ್ನಲ್ಲಿ ತಲಾ ನಾಲ್ಕು, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಛತ್ತೀಸ್ಗಢದಲ್ಲಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News