ವಿಚಾರಣಾಧೀನ ಕೈದಿಗಳ ತ್ವರಿತ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ತಮ್ಮ ಗರಿಷ್ಠ ಜೈಲು ಶಿಕ್ಷೆಯ ಅರ್ಧ ಅಥವಾ ಮೂರನೇ ಒಂದು ಅವಧಿಯನ್ನು ಜೈಲಿನಲ್ಲಿ ಕಳೆದಿರುವ ವಿಚಾರಣಾಧೀನ ಕೈದಿಗಳು ಮತ್ತು ಮೊದಲ ಬಾರಿಯ ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ತ್ವರಿತಗೊಳಿಸುವ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಚಾಲನೆ ನೀಡಿದೆ. ಹೊಸದಾಗಿ ಜಾರಿಯಾಗಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಾನೂನಿನಡಿ ಎಲ್ಲಾ ಅರ್ಹ ಕೈದಿಗಳ ಅರ್ಜಿಗಳನ್ನು ಎರಡು ತಿಂಗಳುಗಳ ಒಳಗೆ ಪರಿಶೀಲಿಸುವಂತೆ ದೇಶಾದ್ಯಂತದ ಎಲ್ಲಾ ಜೈಲು ಸೂಪರಿಂಟೆಂಡೆಂಟ್ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ತಮ್ಮ ಗರಿಷ್ಠ ಶಿಕ್ಷೆಯ ಮೂರನೇ ಒಂದು ಭಾಗವನ್ನು ಜೈಲಿನಲ್ಲಿ ಕಳೆದಿರುವ ಮೊದಲ ಬಾರಿಯ ಅಪರಾಧಿಗಳ ಬಿಡುಗಡೆಗೆ ಅವಕಾಶ ನೀಡುವ ನೂತನ ಕಾಯಿದೆಯ ವಿಧಿಯು, ಈ ಕಾಯಿದೆ ಜಾರಿಗೆ ಬರುವ ಮೊದಲೇ ದಾಖಲಾಗಿರುವ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದ ಬಳಿಕ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿದೆ.
ನೂತನ ಕಾಯಿದೆಯು ಈ ವರ್ಷದ ಜುಲೈ 1ರಂದು ಜಾರಿಗೆ ಬಂದಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 479ನೇ ವಿಧಿಯಡಿ ಪ್ರಯೋಜನ ಪಡೆಯುವ ಎಲ್ಲಾ ಮೊದಲ ಬಾರಿಯ ಅಪರಾಧಿಗಳ ಅರ್ಜಿಗಳನ್ನು ಎರಡು ತಿಂಗಳ ಒಳಗೆ ಸಂಸ್ಕರಿಸುವಂತೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ಪೀಠವೊಂದು ಜೈಲುಗಳ ಸೂಪರಿಂಟೆಂಡೆಂಟ್ಗಳಿಗೆ ನಿರ್ದೇಶನ ನೀಡಿದೆ.
ಸಿಆರ್ಪಿಸಿಯ ಸ್ಥಾನದಲ್ಲಿ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 479ನೇ ವಿಧಿಯನ್ನು ಇನ್ನು ಎಲ್ಲಾ ವಿಚಾರಣಾಧೀನ ಕೈದಿಗಳಿಗೆ ಅನ್ವಯಿಸಬೇಕು ಎಂದು ಶುಕ್ರವಾರ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತು.
ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ನಿರ್ದಿಷ್ಟ ಅವಧಿಯನ್ನು ಕಳೆದರೆ ಅವರು ಜಾಮೀನಿಗೆ ಅರ್ಹರಾಗುತ್ತಾರೆ ಎಂದು ಬಿಎನ್ಎಸ್ಎಸ್ನ 479ನೇ ವಿಧಿ ಹೇಳುತ್ತದೆ. ಆದರೆ, ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆಗೆ ಅರ್ಹವಾಗುವ ಅಪರಾಧಗಳನ್ನು ಮಾಡಿದವರಿಗೆ ಈ ವಿಧಿಯು ಅನ್ವಯಿಸುವುದಿಲ್ಲ.
ಜೈಲಿನ ಸಾಮರ್ಥ್ಯ ಮೀರಿ ಕೈದಿಗಳ ಜಮಾವಣೆಯನ್ನು ಕಡಿಮೆಗೊಳಿಸುವ ಹಾಗೂ ಆ ಮೂಲಕ ಜೈಲುಗಳಲ್ಲಿ ನೆಲೆಸಿರುವ ಅಮಾನವೀಯ ಪರಿಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ವತಃ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.