ಸಂಭಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಪೂಜೆ ನಡೆಸಲು ಯತ್ನಿಸಿದ ಮೂವರ ಬಂಧನ

ಸಂಭಲ್ (ಉ.ಪ್ರ.): ಸಂಭಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಪೂಜೆ ಹಾಗೂ ಹವನ ನಡೆಸಲು ಪ್ರಯತ್ನಿಸಿದ ಆರೋಪದಲ್ಲಿ ದಿಲ್ಲಿಯ ಮೂವರನ್ನು ಬಂಧಿಸಲಾಗಿದೆ. ಈ ಘಟನೆ ಬಳಿಕ ಇಲ್ಲಿನ ಮೊಹಲ್ಲಾ ಕೋಟ್ ಗರ್ವಿ ಪ್ರದೇಶ ಉದ್ವಿಗ್ನಗೊಂಡಿದೆ.
ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಈ ಮಸೀದಿಯ ಸುತ್ತ ಜಿಲ್ಲಾಡಳಿತ ಈಗಾಗಲೇ ಬಿಗಿ ಭದ್ರತೆ ಏರ್ಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸನಾತನ ಸಿಂಗ್, ವೀರ್ ಸಿಂಗ್ ಯಾದವ್, ಅನಿಲ್ ಸಿಂಗ್ ವಿವಾದಿತ ನಿವೇಶನಕ್ಕೆ ಕಾರಿನಲ್ಲಿ ಆಗಮಿಸಿದರು. ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಬಿಷ್ಣೋಯಿ ದೃಢಪಡಿಸಿದ್ದಾರೆ.
‘‘ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡಿರುವುದಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಭವಿಷ್ಯದಲ್ಲಿ ಸಂಭಲ್ ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗುವುದು’’ ಎಂದು ಬಿಷ್ಣೋಯಿ ತಿಳಿಸಿದ್ದಾರೆ.
ಮಸೀದಿಯ ಅಡಿಯಲ್ಲಿದೆ ಎಂದು ಹೇಳಲಾಗುತ್ತಿರುವ ವಿಷ್ಣು ಹರಿ ಹರ ದೇವಾಲಯದಲ್ಲಿ ಪೂಜೆ ನಡೆಸಲು ತಾವು ಇಲ್ಲಿಗೆ ಆಗಮಿಸಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ‘‘ಇಲ್ಲಿ ನಮಾಝ್ ಮಾಡುವುದಾದರೆ, ಪೂಜೆ ಯಾಕೆ ಮಾಡಬಾರದು’’ ಎಂದು ಸನಾತನ್ ಸಿಂಗ್ ಪ್ರಶ್ನಿಸಿದ್ದಾನೆ ಎಂದು ಅವರು ಹೇಳಿದ್ದಾರೆ.