ಕೇರಳ: ಕಾರಿನ ಬಾಗಿಲಿಗೆ ಹೆಬ್ಬೆರಳು ಸಿಲುಕಿಕೊಂಡಿದ್ದರೂ ವ್ಯಕ್ತಿಯನ್ನು ಅರ್ಧ ಕಿ.ಮೀ. ಎಳೆದೊಯ್ದ ದುಷ್ಕರ್ಮಿಗಳು

Update: 2024-12-16 12:40 GMT

PC : X \ @Madrassan_Pinky

ಕೇರಳ: ಬುಡಕಟ್ಟು ವ್ಯಕ್ತಿಯೋರ್ವರ ಹೆಬ್ಬೆರಳು ಕಾರಿನ ಬಾಗಿಲಿಗೆ ಸಿಕ್ಕಿ ಹಾಕಿಕೊಂಡ ಬಳಿಕ ಅಪರಿಚಿತರ ತಂಡವೊಂದು ಅವರನ್ನು ಅರ್ಧ ಕಿ.ಮೀ. ದೂರಕ್ಕೆ ಕಾರಿನಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಕೇರಳದ ಮಾನಂತವಾಡಿಯಲ್ಲಿ ನಡೆದಿದೆ.

ಕೂಡಲ್ ಕಡವು ಚೆಮ್ಮಾಡ್ ನ ಸಂತ್ರಸ್ತನನ್ನು ಮಥನ್(49) ಎಂದು ಗುರತಿಸಲಾಗಿದ್ದು, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರನ್ನು ಕಾರಿನಲ್ಲಿ ಎಳೆದೊಯ್ದ ಕಾರಣ ಅವರ ಕೈ, ಕಾಲು ಮತ್ತು ಸೊಂಟಕ್ಕೆ ಗಾಯಗಳಾಗಿದ್ದು, ಅವರನ್ನು ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದೃಶ್ಯಗಳನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿದೆ. ವಯನಾಡಿನ ಕಣಿಯಂಬಟ್ಟ ಮೂಲದ ಹರ್ಷಿದ್ ಮತ್ತು ಆತನ ಸ್ನೇಹಿತರು ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾನಂತವಾಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 110 ಸೇರಿದಂತೆ ವಿವಿಧ ಸೆಕ್ಷನ್‌ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ʼಚೆಕ್ ಡ್ಯಾಮ್ ʼವೀಕ್ಷಣೆಗೆ ಬಂದಿದ್ದ ಎರಡು ಪ್ರವಾಸಿ ತಂಡಗಳ ನಡುವೆ ವಾಗ್ವಾದ ನಡೆದಿದ್ದು, ಮಥನ್‌ ಸೇರಿದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಪ್ರವಾಸಿಗರ ತಂಡವೊಂದು ಕಾರನ್ನು ಚಲಾಯಿಸಿಕೊಂಡು ತೆರಳಿದೆ. ಈ ಸಂದರ್ಭದಲ್ಲಿ ಕಾರಿನ ಬಾಗಿಲಿಗೆ ಮಥನ್ ಅವರ ಹೆಬ್ಬೆರಳು ಸಿಲುಕಿತ್ತು. ಅದನ್ನು ಲೆಕ್ಕಿಸದೆ ಅರ್ಧ ಕಿಲೋ ಮೀಟರ್ ನಷ್ಟು ದೂರಕ್ಕೆ ಅವರನ್ನು ಎಳೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತ್ಯಕ್ಷದರ್ಶಿಯೋರ್ವರು ಮಾಹಿತಿಯನ್ನು ನೀಡಿದ್ದು, ಕಾರಿನಲ್ಲಿ ನಾಲ್ವರು ಇದ್ದರು. ಇತರರು ಕಾರನ್ನು ನಿಲ್ಲಿಸುವಂತೆ ಹೇಳುತ್ತಿದ್ದರು. ಮಥನ್ ಕೂಡ ಕಾರು ನಿಲ್ಲಿಸಿ ಎಂದು ಜೋರಾಗಿ ಕೂಗಿದ್ದರು, ಆದರೆ ಅವರನ್ನು ಅರ್ಧ ಕಿಮೀ ದೂರಕ್ಕೆ ಎಳೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಓಆರ್ ಕೇಲು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆದಿವಾಸಿ ವ್ಯಕ್ತಿ ಮೇಲಿನ ದಾಳಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News