ಬೀಫ್ ಕಳ್ಳಸಾಗಣೆಗಾರರಿಗೆ ಪಾಸ್‌ ಒದಗಿಸಿದ ಕೇಂದ್ರ ಸಚಿವ ಶಂತನು ಠಾಕೂರ್‌: ಸಂಸದೆ ಮಹುವಾ ಮೊಯಿತ್ರಾ ಆರೋಪ

Update: 2024-07-08 07:37 GMT

Photo:X/@MahuaMoitra

ಹೊಸದಿಲ್ಲಿ: ಭಾರತ-ಬಾಂಗ್ಲಾದೇಶ ಗಡಿ ಬಳಿಯಿರುವ ಬೀಫ್ ಕಳ್ಳಸಾಗಣೆದಾರರಿಗೆ ಕೇಂದ್ರ ಸಚಿವ ಶಂತನು ಠಾಕೂರ್ ಅಧಿಕೃತ ಸಾಗಣೆ ಪರವಾನಗಿ ಪತ್ರ (ಪಾಸ್) ವಿತರಿಸುತ್ತಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ಪಾಸ್‌ ನ ಚಿತ್ರವನ್ನು ಲಗತ್ತಿಸಿ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ, ಶಂತನು ಠಾಕೂರ್ ಮೂರು ಕೆಜಿ ತೂಕದ ಗೋಮಾಂಸದ ಕಳ್ಳ ಸಾಗಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಈ ಪೋಸ್ಟ್‌ನೊಂದಿಗೆ ಗಡಿ ಭದ್ರತಾ ಪಡೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವನ್ನೂ ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಈ ವಿಷಯದ ಕುರಿತು ಮೌನಕ್ಕೆ ಶರಣಾಗಿರುವ ಗೋರಕ್ಷಕರು ಮತ್ತು ಗೋದಿ ಮಾಧ್ಯಮಗಳನ್ನು ತಿವಿದಿದ್ದಾರೆ.

ಶಂತನು ಠಾಕೂರ್ ಅವರ ಅಧಿಕೃತ ಲೆಟರ್ ಹೆಡ್ ಎಂದು ಹೇಳಲಾಗಿರುವ ಪತ್ರವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ. ಗೋಮಾಂಸವನ್ನು ಸಾಗಿಸಲು ಅನುಮತಿ ನೀಡಿ, ಈ ಕುರಿತು ಗಡಿ ಭದ್ರತಾ ಪಡೆಯ 85ನೇ ತುಕಡಿಗೆ ಶಂತನು ಠಾಕೂರ್ ಬರೆದಿರುವ ಪತ್ರ ಇದೆನ್ನಲಾಗಿದೆ.

ವರದಿಗಳ ಪ್ರಕಾರ, ಬಿಜೆಪಿಯ ಬೊಂಗಾವ್ ಸಂಸದ ಠಾಕೂರ್ ಅವರು ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ವಿವಿಧ ವ್ಯವಹಾರಗಳನ್ನು ನಡೆಸಲು ತಮ್ಮ ಸಂಸದರ ಲೆಟರ್‌ಹೆಡ್‌ನಲ್ಲಿ ಅನುಮತಿ ನೀಡಿದ್ದಕ್ಕಾಗಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಆರೆಸ್ಸೆಸ್ ಕೂಡ ಈ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ವಿವಿಧ ವ್ಯವಹಾರಗಳನ್ನು ನಡೆಸಲು ಬಾಂಗಾಂವ್ ಲೋಕಸಭಾ ಕ್ಷೇತ್ರದ ಸಂಸದರಾದ ಶಂತನು ಠಾಕೂರ್ ತಮ್ಮ ಸಂಸದರ ಲೆಟರ್‌ಹೆಡ್‌ನಲ್ಲಿ ಅನುಮತಿ ನೀಡುತ್ತಿರುವುದರಿಂದ, ವಿರೋಧ ಪಕ್ಷಗಳು ಅವರ ಮೇಲೆ ಮುಗಿ ಬಿದ್ದಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News