ರಾಜ್ಯದಲ್ಲಿ ಸಿಎಎ ಜಾರಿಗೊಳಿಸಲ್ಲ ಎನ್ನಲು ತಮಿಳುನಾಡು ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ: ಅಣ್ಣಾಮಲೈ ವಾಗ್ದಾಳಿ
ಚೆನ್ನೈ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ನೆಲದ ಕಾನೂನಿನನ್ವಯ ಯಾವುದೇ ಅಧಿಕಾರವಿಲ್ಲ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ, ಸಹವರ್ತಿ ಪಟ್ಟಿ ಹಾಗೂ ಶಾಸನಕ್ಕೆ ಸಂಬಂಧಿಸಿದಂತೆ ಅಧಿಕಾರದ ಬೇರ್ಪಡೆಯ ಚೌಕಟ್ಟಿನ ಕುರಿತು ವಿವರಿಸಿದ ಅಣ್ಣಾಮಲೈ, ಸ್ಟಾಲಿನ್ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ನೆನಪಿಸಿದರು.
ರಾಜಕೀಯವಾಗಿ ಸ್ಟಾಲಿನ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಬಹುದಾದರೂ, ತಮಿಳುನಾಡಿನಲ್ಲಿ ಕೇಂದ್ರ ಸರಕಾರದ ಕಾನೂನನ್ನು ಜಾರಿಗೊಳಿಸುವುದರ ವಿರುದ್ಧ ಅಧಿಕೃತ ನಿಲುವು ತಳೆಯುವಂತಿಲ್ಲ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳಲು ಅವರಿಗೆ ಸಂವಿಧಾನದಡಿ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಸ್ಟಾಲಿನ್ ಅಂತಹ ನಿಲುವಿಗೆ ಅಂಟಿಕೊಂಡರೆ, ಅವರು ಪ್ರಮಾಣ ವಚನಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.