ಒಟ್ಟು ಎನ್‌ಪಿಎಗಳಲ್ಲಿ ಪ್ರಮುಖ 100 ಸುಸ್ತಿದಾರರ ಪಾಲು ಶೇ.43; ನಾಲ್ಕು ಲಕ್ಷ ಕೋಟಿ ರೂ.ಗೂ ಅಧಿಕ
ಹೊಸದಿಲ್ಲಿ: ದೇಶದ (ಎಸ್‌ಸಿಬಿ)ಗಳಲ್ಲಿ ಮಾರ್ಚ್ 2019ರವರೆಗೆ ಒಟ್ಟು ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳಲ್ಲಿ ಶೇ.43ರಷ್ಟು ಅಂದರೆ 4.02 ಲ.ಕೋ.ರೂ.ಗಳು 100 ಕಂಪನಿಗಳ ಹೆಸರುಗಳಲ್ಲಿದ್ದವು ಮತ್ತು ಈ ಪೈಕಿ 30 ಸಾಲಗಾರರು ಒಟ್ಟು ಎನ್‌ಪಿಎಗಳ ಶೇ.30ಕ್ಕೂ ಅಧಿಕ,2.86 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ಬಾಕಿಯುಳಿಸಿದ್ದರು ಎಂದು ಆಂಗ್ಲದೈನಿಕ The Indian Express ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.
ಮಾರ್ಚ್ 31,2019ಕ್ಕೆ ಇದ್ದಂತೆ ಎಸ್‌ಸಿಬಿಗಳು ಒಟ್ಟು 9.33 ಲಕ್ಷ ಕೋಟಿ ರೂ.ಗಳ ಎನ್‌ಪಿಎಗಳನ್ನು ಹೊಂದಿದ್ದು, ಇದು 2018ರ ಬಳಿಕ ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ದಾಖಲಾದ ಎರಡನೇ ಅತ್ಯಂತ ಹೆಚ್ಚು ಕೆಟ್ಟ ಸಾಲಗಳ ಮೊತ್ತವಾಗಿದೆ.
ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು ನಡೆಸುತ್ತಿರುವ ವಿವಿಧ ಕ್ಷೇತ್ರಗಳಲ್ಲಿಯ ದೇಶದ ಕೆಲವು ಅತ್ಯಂತ ದೊಡ್ಡ ಕಂಪನಿಗಳನ್ನು ಒಳಗೊಂಡಿರುವ ಅಗ್ರ 100 ಬ್ಯಾಂಕ್ ಸಾಲಗಳ ಸುಸ್ತಿದಾರರು ಮಾ.31,2019ಕ್ಕೆ ಇದ್ದಂತೆ ಒಟ್ಟು 8.44 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ಹೊಂದಿದ್ದು,ಈ ಪೈಕಿ ಸುಮಾರು ಅರ್ಧದಷ್ಟು ಮೊತ್ತವನ್ನು ಕೆಟ್ಟ ಸಾಲಗಳು ಅಥವಾ ಎನ್‌ಪಿಎಗಳು ಎಂದು ಘೋಷಿಸಲಾಗಿತ್ತು.
ತಯಾರಿಕೆ,ವಿದ್ಯುತ್ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿಯ ಕೇವಲ 15 ಕಂಪನಿಗಳು ಈ 100 ಕಂಪನಿಗಳ ಒಟ್ಟು ಸಾಲದಲ್ಲಿ ಶೇ.50ಕ್ಕೂ ಅಧಿಕ (4.58 ಲಕ್ಷ ಕೋಟಿ ರೂ.) ಪಾಲನ್ನು ಹೊಂದಿದ್ದವು.
ಇದೇ ಮೊದಲ ಬಾರಿಗೆ ಪತ್ರಿಕೆಯು ಆರ್‌ಟಿಐ ಕಾಯ್ದೆಯಡಿ ಅಗ್ರ 100 ಬ್ಯಾಂಕ್ ಸುಸ್ತಿದಾರರ ಪಟ್ಟಿಯನ್ನು ಪಡೆದುಕೊಂಡಿದೆ. ಇದಕ್ಕಾಗಿ ಅದು 2019ರಿಂದ ನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಆರ್‌ಬಿಐಗೆ ಹಲವಾರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿತ್ತು. ವಿಷಯವು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದವರೆಗೂ ತಲುಪಿತ್ತು ಮತ್ತು ಹಲವಾರು ವಿಚಾರಣೆಗಳ ಬಳಿಕ ಕೊನೆಗೂ ನವಂಬರ್ 2023ರಲ್ಲಿ ಆರ್‌ಬಿಐ ಪಟ್ಟಿಯನ್ನು,ಅದೂ ಭಾಗಶಃ ಮಾತ್ರ ಬಹಿರಂಗಗೊಳಿಸಿತ್ತು.
2015,ಮಾ.31ರಂದು 3.23 ಲಕ್ಷ ಕೋಟಿ ರೂ.ಗಳಿದ್ದ ಒಟ್ಟು ಎನ್‌ಪಿಎಗಳು 2018,ಮಾ.31ಕ್ಕೆ 10.36 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿದ್ದು, ಇದು ಸಾರ್ವಕಾಲಿಕ ಅಧಿಕ ಮೊತ್ತವಾಗಿತ್ತು. 2019ರಲ್ಲಿ ಈ ಮೊತ್ತ ಇಳಿಕೆಯಾಗಿದ್ದು,ನಂತರ ಮತ್ತಷ್ಟು ಇಳಿದು 2023,ಮಾರ್ಚ್‌ನಲ್ಲಿ 5.71 ಲಕ್ಷ ಕೋಟಿ ರೂ.ಆಗಿತ್ತು. ಬ್ಯಾಂಕ್‌ಗಳು ಸಾಲಗಳನ್ನು ರೈಟ್ ಡೌನ್ (ರೈಟ್ ಆಫ್ ಎಂದೂ ಹೇಳಬಹುದು) ಮಾಡಿದ್ದು ಇದಕ್ಕೆ ಭಾಗಶಃ ಕಾರಣವಾಗಿತ್ತು.
ಆರ್‌ಟಿಐ ಕಾಯ್ದೆಯಡಿ ಲಭ್ಯ ಮಾಹಿತಿಯು ಅಗ್ರ 100 ಬ್ಯಾಂಕ್ ಸುಸ್ತಿದಾರರು (ಇದು 2019ರ ಬಳಿಕ ಬದಲಾಗಿರಬಹುದು) 2024,ಮಾ.31ರ ವೇಳೆಗೆ 1.07 ಲಕ್ಷ ಕೋ.ರೂ.ಗಳ ಎನ್‌ಪಿಎಗಳನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸಿದೆ.
ಅಗ್ರ 100 ಬ್ಯಾಂಕ್ ಸಾಲಗಳ ಸುಸ್ತಿದಾರರ ಪಟ್ಟಿಯಲ್ಲಿ ತಯಾರಿಕೆ, ವಿದ್ಯುತ್, ನಿರ್ಮಾಣ,ರಿಯಲ್ ಎಸ್ಟೇಟ್,ದೂರಸಂಪರ್ಕ,ಬ್ಯಾಂಕಿಂಗ್ ಅಥವಾ ಹಣಕಾಸು ಮಧ್ಯವರ್ತಿಗಳಂತಹ ಕ್ಷೇತ್ರಗಳಲ್ಲಿಯ ದೇಶದ ಪ್ರಮುಖ ಉದ್ಯಮಿಗಳು ಸೇರಿದ್ದಾರೆ.
ಪತ್ರಿಕೆಯು ತನ್ನ ತನಿಖೆಯ ಮೊದಲ ಭಾಗದಲ್ಲಿ ಪಟ್ಟಿಯಲ್ಲಿರುವ ಒಟ್ಟು 82 ಕಂಪನಿಗಳು ದಿವಾಳಿತನ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ ಮತ್ತು ಸುಮಾರು ಮೂರನೇ ಒಂದರಷ್ಟು ಕಂಪನಿಗಳು ದಿವಾಳಿ ಹಾದಿಯಲ್ಲಿವೆ ಎನ್ನುವುದನ್ನು ಬಹಿರಂಗಗೊಳಿಸಿದೆ. ಅಂದರೆ ಈ ಪ್ರಕರಣಗಳಲ್ಲಿ ಬ್ಯಾಂಕುಗಳು ಬಹಳ ಕಡಿಮೆ ಹಣವನ್ನು ಮರುವಸೂಲು ಮಾಡಿರಬಹುದು.
ಪಟ್ಟಿಯಲ್ಲಿನ ಗರಿಷ್ಠ 34 ಕಂಪನಿಗಳು ವಿದ್ಯುತ್ ಕ್ಷೇತ್ರಕ್ಕೆ ಸೇರಿದ್ದರೆ,32 ತಯಾರಿಕೆ ಕ್ಷೇತ್ರಕ್ಕೆ ಸೇರಿವೆ. 20 ನಿರ್ಮಾಣ ಅಥವಾ ರಿಯಲ್ ಎಸ್ಟೇಟ್ ಕಂಪನಿಗಳಾಗಿದ್ದರೆ ಐದು ದೂರಸಂಪರ್ಕ ಮತ್ತು ಒಂಭತ್ತು ಇತರ ಕ್ಷೇತ್ರಗಳಿಗೆ ಸೇರಿವೆ.
ಮಾರ್ಚ್ 2019ಕ್ಕೆ ಇದ್ದಂತೆ 41,400 ಕೋಟಿ ರೂ.ಗಳ ಸಾಲಬಾಕಿಯೊಂದಿಗೆ ಭೂಷಣ ಪವರ್ ಆ್ಯಂಡ್ ಸ್ಟೀಲ್ ಲಿಮಿಟೆಡ್ ಪಟ್ಟಿಯ ಅಗ್ರಸ್ಥಾನದಲ್ಲಿತ್ತು. ಎಸ್ಸಾರ್ ಸ್ಟೀಲ್ ಇಂಡಿಯಾ ಲಿ.,ವೀಡಿಯೊಕಾನ್ ಇಂಡಸ್ಟ್ರೀಸ್ ಲಿ.,ಜಯಪ್ರಕಾಶ ಅಸೋಸಿಯೇಟ್ಸ್‌ನಂತಹ ಕಂಪನಿಗಳು ಪಟ್ಟಿಯಲ್ಲಿ ಅಗ್ರ 10 ಸ್ಥಾನಗಳಲ್ಲಿವೆ.